Saturday, November 15, 2025

ಭೂ ಕುಸಿತದ ಗಾಯ ಮರೆಸಿ ಮತ್ತೆ ನಳನಳಿಸಿದ ‘ಕಾವೇರಿ ನಾಡು’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ‘ಕಾವೇರಿ ನಾಡು’ ಕೊಡಗು, 2018 ರಲ್ಲಿ ಕಂಡ ಘೋರ ವಿಪತ್ತಿನ ಕಹಿ ನೆನಪುಗಳಿಂದ ನಿಧಾನವಾಗಿ ಹೊರಬರುತ್ತಿದೆ. ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದಂತಹ ಮಹಾ ದುರಂತಕ್ಕೆ ಈ ಜಿಲ್ಲೆ ತುತ್ತಾಗಿತ್ತು. ದೊಡ್ಡಮಟ್ಟದ ಭೂಕುಸಿತಗಳು ಮತ್ತು ಪ್ರವಾಹದಿಂದಾಗಿ ಸಾವು-ನೋವು ಸಂಭವಿಸಿ, ಅನೇಕ ಕುಟುಂಬಗಳು ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವಂತಾಗಿತ್ತು. ಬೆಟ್ಟಗುಡ್ಡಗಳು ಕುಸಿದು ಬಿದ್ದು ಜನರನ್ನು ಅಕ್ಷರಶಃ ನಲುಗಿಸಿದ್ದ ಆ ಕರಾಳ ದಿನಗಳು ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ.

ಆದರೆ, ಪ್ರಕೃತಿ ತಾನಾಗಿಯೇ ತನ್ನ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಆರಂಭಿಸಿದೆ. ಆ ಘೋರ ದುರಂತ ಸಂಭವಿಸಿ ಬರೊಬ್ಬರಿ ಆರು-ಏಳು ವರ್ಷಗಳು ಕಳೆದಿವೆ. 2018-19 ರಲ್ಲಿ ಭೂಕುಸಿತದಿಂದಾಗಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟದ ಸಾಲುಗಳು ಬೋಳಾಗಿ, ಕೆಂಪು ಮಿಶ್ರಿತ ಮಣ್ಣಿನಿಂದ ಆವೃತವಾಗಿದ್ದವು. ಆ ಕರಾಳ ದೃಶ್ಯಗಳು, ಪ್ರಕೃತಿ ಮಾತೆಯ ಮೇಲೆ ಬಿದ್ದ ಗಾಯದ ಗುರುತುಗಳಂತಿದ್ದವು.

ಆಗ ಇಡೀ ರಾಜ್ಯದ ಜನತೆ ಕೊಡಗಿನ ಜನರ ನೆರವಿಗೆ ಧಾವಿಸಿದ್ದರು. ಇಂದು, ದುರಂತ ನಡೆದ ಅದೇ ಸ್ಥಳಗಳಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಕುಸಿದು ಬಿದ್ದ ಬೆಟ್ಟಗಳ ಮೇಲೆ ಮತ್ತೆ ಹಸಿರು ಚಿಗುರೊಡೆದಿದೆ. ಮರಗಿಡಗಳು ಸಮೃದ್ಧವಾಗಿ ಬೆಳೆಯುತ್ತಿದ್ದು, ಆ ದುರಂತದ ನೋವನ್ನು ಮರೆಸುವಂತೆ ಭಾಸವಾಗುತ್ತಿದೆ. ಪ್ರಕೃತಿಯಲ್ಲಿನ ಈ ಪುನಶ್ಚೇತನ ಮತ್ತು ಬದಲಾವಣೆ ಕಂಡು ಕೊಡಗಿನ ಜನತೆ ಸಂತಸಗೊಂಡಿದ್ದಾರೆ. ಈ ಹಸಿರು, ಬದುಕು ಮತ್ತೆ ಚಿಗುರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

error: Content is protected !!