Monday, September 22, 2025

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದಲ್ಲಿ 5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಹಿರಿಯ ನಾಗರಿಕರ ಮೃತದೇಹ ಭಾನುವಾರ (ಆಗಸ್ಟ್‌ 3) ಪತ್ತೆಯಾಗಿದೆ.

ಇವರೆಲ್ಲ ಕಾರು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಮಾರ್ಷಲ್‌ ಕಂಟ್ರಿ ಶೆರೀಫ್‌ ಕಚೇರಿ ತಿಳಿಸಿದೆ. ಮೃತಪಟ್ಟವರನ್ನು ಆಶಾ ದಿವಾನ್‌ (85), ಕಿಶೋರ್‌ ದಿವಾನ್‌ (89), ಶೈಲೇಶ್‌ ದಿವಾನ್‌ (86) ಮತ್ತು ಗೀತಾ ದಿವಾನ್‌ (84) ಎಂದು ಗುರುತಿಸಲಾಗಿದೆ.

ನ್ಯೂಯಾರ್ಕ್‌ನ ಬಫೆಲೋ ಪ್ರದೇಶದಿಂದ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ಗೆ ರಸ್ತೆ ಮೂಲಕ ತೆರಳಿತ್ತಿದ್ದಾಗ ಇವರ ಕಾರು ಅಪಘಾತಕ್ಕೀಡಾಗಿತ್ತು.

ಈ ನಾಲ್ವರು ಸಂಚರಿಸುತ್ತಿದ್ದ ಟೊಯೊಟಾ ಕ್ಯಾಮ್ರಿ ಬಿಗ್ ವ್ಹೀಲಿಂಗ್‌ ಕ್ರೀಕ್ ರಸ್ತೆಯ ಕಡಿದಾದ ತಿರುವಿನಲ್ಲಿ ಕಣಿವೆಗೆ ಉರುಳಿ ಬಿದ್ದಿತ್ತು. ಇದು ಜನವಸತಿ ಪ್ರದೇಶದಿಂದ ದೂರದಲ್ಲಿರುವುದರಿಂದ ರಕ್ಷಣಾ ತಂಡಗಳಿಗೆ ಅಪಘಾತದ ಸ್ಥಳವನ್ನು ತಲುಪಲು ತಡವಾಯಿತು ಎಂದು ವರದಿಯೊಂದು ತಿಳಿಸಿದೆ.

ಕಾರು ಅಪಘಾತಕ್ಕೇನು ಕಾರಣ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಾಲ್ವರು ಹಿರಿಯ ನಾಗರಿಕರು ಕೊನೆಯ ಬಾರಿಗೆ ಜುಲೈ 29ರಂದು ಪೆನ್ಸಿಲ್ವೇನಿಯಾದ ಎರಿಯ ಪೀಚ್ ಸ್ಟ್ರೀಟ್‌ನಲ್ಲಿರುವ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರ ಕೊನೆಯ ಕ್ರೆಡಿಟ್ ಕಾರ್ಡ್ ವಹಿವಾಟು ಕೂಡ ಇದೇ ಸ್ಥಳದಲ್ಲಿ ನಡೆದಿತ್ತು.

ಜುಲೈ 29ರಿಂದ ನಾಪತ್ತೆಯಾದ ನಾಲ್ವರ ಪೈಕಿ ಯಾರೊಬ್ಬರೂ ಕರೆಗೆ ಉತ್ತರಿಸಿರಲಿಲ್ಲ ಎಂದು ಅವರ ಪರಿಚಿತರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದರು. ನಾಪತ್ತೆಯಾದ ಇವರ ಪತ್ತೆಗೆ ಹೆಲಿಕಾಪ್ಟರ್‌ ಮತ್ತು ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿತ್ತು. ಇದೀಗ ಮೃತದೇಹವನ್ನು ಪತ್ತೆ ಹಚ್ಚಲಾಗಿದ್ದು, ಕುಟುಂಬಕ್ಕೆ ಹಸ್ತಾಂತರಿಸುವ ಪ್ರತಿಕ್ರಿಯೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ