ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೆಹಲಿ ಸ್ಫೋಟವನ್ನು ತೀವ್ರವಾಗಿ ಖಂಡಿಸಿದೆ. ಅತ್ಯಂತ ಭೀಕರ ಭಯೋತ್ಪಾದಕ ಕೃತ್ಯ ಎಂದು ಘೋಷಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, “ಘೋರ ಕೃತ್ಯ”ದ ಸಂತ್ರಸ್ತರಿಗೆ ಗೌರವ ಸಲ್ಲಿಸಲು ಸಂಪುಟ ಸದಸ್ಯರು ಎರಡು ನಿಮಿಷಗಳ ಮೌನಾಚರಣೆ ಮಾಡಿದರು ಎಂದು ಮಾಹಿತಿ ನೀಡಿದರು.
ಭಾರತದಲ್ಲಿ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯಿದೆ ಎಂದು ಮೋದಿ ಸರ್ಕಾರ ಪುನರುಚ್ಚರಿಸಿದೆ. ಈ ಘಟನೆಯ ತನಿಖೆಯನ್ನು ಅತ್ಯಂತ ತುರ್ತಾಗಿ ಮತ್ತು ವೃತ್ತಿಪರತೆಯಿಂದ ಮುಂದುವರಿಸಬೇಕೆಂದು ಸಂಪುಟವು ನಿರ್ದೇಶಿಸಿದೆ ಎಂದಿದ್ದಾರೆ.
ಸರ್ಕಾರ ಉನ್ನತ ಮಟ್ಟದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ದೇಶದ ಜನರಿಗೆ ಸರ್ಕಾರ ಭರವಸೆ ನೀಡಿದೆ. ರಾಷ್ಟ್ರೀಯ ಭದ್ರತೆ ಮತ್ತು ಪ್ರತಿಯೊಬ್ಬ ನಾಗರಿಕರ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ. ಅದರಂತೆ ಎಲ್ಲಾ ಭಾರತೀಯರ ಜೀವನ ಮತ್ತು ಯೋಗಕ್ಷೇಮವನ್ನು ಕಾಪಾಡುವ ಸರ್ಕಾರದ ದೃಢ ಸಂಕಲ್ಪವನ್ನು ಸಂಪುಟ ಪುನರುಚ್ಚರಿಸುತ್ತದೆ ಎಂದು ಸಚಿವರು ಹೇಳಿದರು.

