Thursday, November 13, 2025

ಸರ್ಕಾರ ಉತ್ಪಾದಕ ವಲಯಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ: ಪ್ರಹ್ಲಾದ್ ಜೋಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ರಾಜ್ಯ ಸರ್ಕಾರದ ಲೋಪಗಳ ಬಗ್ಗೆ ಗಮನ ಸೆಳೆದಿದ್ದಾರೆ. ಅಲ್ಲದೇ, ಕೇಂದ್ರದ ಸುಧಾರಣಾ ಕ್ರಮಗಳನ್ನು ಮರೆಮಾಚುತ್ತಿರುವುದು ಸರಿಯಲ್ಲವೆಂದು ಆಕ್ಷೇಪಿಸಿದ್ದಾರೆ.

ನಿಮ್ಮ ಇತ್ತೀಚಿಗಿನ ಕಬ್ಬು ಬೆಳೆಗಾರರ ಕಲ್ಯಾಣದ ಬಗೆಗಿನ ಕಾಳಜಿಯನ್ನು ಪ್ರಶಂಸಿಸುತ್ತೇನೆ. ಆದರೆ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ಸಕ್ಕರೆ ಕ್ಷೇತ್ರದ ದೀರ್ಘಾವಧಿ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಕೈಗೊಂಡ ಪರಿವರ್ತನಾತ್ಮಕ ಸುಧಾರಣೆಗಳು ಮತ್ತು ಮೂಲಭೂತ ವಾಸ್ತವಗಳನ್ನು ಕಡೆಗಣಿಸುವಂತೆ ತೋರುತ್ತಿರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಸಂಗತಿಗಳನ್ನು ನಾನು ಪುನಃ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕೇಂದ್ರವು ಬೆಲೆ ಸ್ಥಿರತೆ ಮತ್ತು ಮಾರುಕಟ್ಟೆ ವೈವಿಧ್ಯತೆ ಎರಡನ್ನೂ ಉತ್ತಮವಾಗಿಸಿದೆ. ಆದರೆ ಪಾವತಿ ಜಾರಿ, ನೀರಾವರಿ ಮತ್ತು ಸಬ್ಸಿಡಿ ವಿತರಣೆಯಂತಹ ಸ್ಥಳೀಯ ಅನುಷ್ಠಾನದ ಹೊಣೆ ರಾಜ್ಯ ಸರ್ಕಾರದ ಮೇಲಿದೆ ಎಂಬುದನ್ನು ಮರೆಯದಿರಿ ಎಂದು ಸಿಎಂಗೆ ಚಾಟಿ ಬೀಸಿದ್ದಾರೆ.

2025-26ರ ಸಾಲಿನಲ್ಲಿ ಕ್ವಿಂಟಲ್‌ಗೆ 355 ರೂ. ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಅನ್ನು 10.25% ಇಳುವರಿ ದರದಲ್ಲಿ, ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸುಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಈ ಬೆಲೆಯು ಉತ್ಪಾದನಾ ವೆಚ್ಚದ ಮೇಲೆ 105% ಕ್ಕಿಂತ ಹೆಚ್ಚಿನ ಅಂತರವನ್ನು ಒದಗಿಸುತ್ತದೆ. ಇದು ರೈತರ ರಕ್ಷಣೆಯಲ್ಲಿ ಅಭೂತಪೂರ್ವ ಮಟ್ಟವಾಗಿದೆ. FRP ಕೇವಲ ಕನಿಷ್ಠ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. ರಾಜ್ಯಗಳು ಹೆಚ್ಚಿನ ರಾಜ್ಯ ಸಲಹಾ ಬೆಲೆ ಘೋಷಿಸಲು ಮುಕ್ತವಾಗಿವೆ. ಆದಾಗ್ಯೂ, ಕರ್ನಾಟಕದಲ್ಲಿ SAP ಅನ್ನು ಘೋಷಿಸಿಲ್ಲ ಎಂದಿದ್ದಾರೆ.

error: Content is protected !!