Thursday, November 13, 2025

ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರನ ಕೈಯಲ್ಲಿ ಮೊಬೈಲ್: NIA ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿಯ ಪರಪ್ಪನ ಅಗ್ರಹಾರ ಜೈಲಿನ ಭದ್ರತೆ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮೂಡಿದೆ. ಕೈದಿಗಳು ಹಾಗೂ ಉಗ್ರರಿಗೆ ‘ರಾಜಾತಿಥ್ಯ’ ನೀಡಲಾಗುತ್ತಿದೆ ಎಂಬ ಆರೋಪದ ನಡುವೆ, ಜೈಲಿನೊಳಗಿನ ಶಂಕಿತ ಉಗ್ರನ ಕೈಯಲ್ಲಿ ಮೊಬೈಲ್ ಇರುವ ಘಟನೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಗೆ ಮುಂದಾಗಿದೆ.

ಮೂಲಗಳ ಪ್ರಕಾರ, ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಮೊಬೈಲ್ ಬಳಸುತ್ತಿರುವ ವಿಡಿಯೋ ಸಿಕ್ಕಿದ ನಂತರ ಎನ್‌ಐಎ ಅಧಿಕಾರಿಗಳು ತಕ್ಷಣ ಜೈಲಿಗೆ ಭೇಟಿ ನೀಡಿ ವಿಚಾರಣೆ ಆರಂಭಿಸಿದ್ದಾರೆ. ಈ ಮೊಬೈಲ್ ಹೇಗೆ ಉಗ್ರನ ಕೈಗೆ ತಲುಪಿತು ಎಂಬುದರ ಕುರಿತು ಅಧಿಕಾರಿಗಳು ಪಿನ್ ಟು ಪಿನ್ ತನಿಖೆ ನಡೆಸುತ್ತಿದ್ದಾರೆ. ಜೈಲಿನೊಳಗಿಂದ ಯಾರಾದರೂ ಸಹಕರಿಸಿದರೆ, ಅವರ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ತನಿಖಾ ಅಧಿಕಾರಿಗಳು ಜೈಲಿನ ಅಧಿಕಾರಿಗಳಿಂದ ಉಗ್ರನ ಚಟುವಟಿಕೆಗಳ ವಿವರಗಳನ್ನು ಕಲೆಹಾಕುತ್ತಿದ್ದಾರೆ. ವಿಡಿಯೋ ಯಾವಾಗ ಚಿತ್ರೀಕರಿಸಲಾಯಿತು, ಎಷ್ಟು ದಿನಗಳಿಂದ ಮೊಬೈಲ್ ಉಗ್ರನ ಬಳಿಯಿತ್ತು ಹಾಗೂ ಮೊಬೈಲ್ ಈಗ ಎಲ್ಲಿದೆ ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಇದೇ ವೇಳೆ, ಉಗ್ರನು ಜೈಲಿನೊಳಗೇ ಕುಳಿತು ದೇಶ ವಿರೋಧಿ ಚಟುವಟಿಕೆಗಳ ಪ್ಲಾನ್ ಮಾಡುತ್ತಿದ್ದಾನೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಹಿನ್ನೆಲೆ ಎನ್‌ಐಎ ತಂಡ ಸಂಪೂರ್ಣ ತನಿಖೆ ನಡೆಸಲು ಸಜ್ಜಾಗಿದೆ.

error: Content is protected !!