ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ಲಾಮಾಬಾದ್‌ನಲ್ಲಿ ನಡೆದ ಸ್ಫೋಟದ ಬಳಿಕ ಆತಂಕ ಹೆಚ್ಚಾಗುತ್ತಿದ್ದರೂ, ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ತಂಡಕ್ಕೆ ತಮ್ಮ ಸರಣಿಯನ್ನು ಪೂರ್ಣಗೊಳಿಸಲು ಕ್ರಿಕೆಟ್ ಬೋರ್ಡ್ ಕಠಿಣ ಆದೇಶ ನೀಡಿದೆ. ಪಾಕಿಸ್ತಾನ್ ವಿರುದ್ಧದ ಏಕದಿನ ಸರಣಿಯಿಂದ ಹಿಂದೆ ಸರಿದರೆ ಆಟಗಾರರಿಗೆ ಎರಡು ವರ್ಷಗಳ ಕಾಲ ನಿಷೇಧ ವಿಧಿಸಲಾಗುವುದು ಎಂದು ಲಂಕಾ ಬೋರ್ಡ್ ಸ್ಪಷ್ಟ ಎಚ್ಚರಿಕೆ ನೀಡಿದೆ.
ಮಂಗಳವಾರ ನಡೆದ ಆತ್ಮಾಹುತಿ ದಾಳಿಯ ನಂತರ ಕೆಲ ಆಟಗಾರರು ತವರಿಗೆ ಮರಳಲು ಮನವಿ ಸಲ್ಲಿಸಿದ್ದರು. ಅವರು ಸುರಕ್ಷತೆಯ ಕಾಳಜಿಯಿಂದ ಪಂದ್ಯ ಮುಂದುವರಿಸಲು ಹಿಂಜರಿದರೂ, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಿ ತಂಡದ ಸುರಕ್ಷತೆಯ ಭರವಸೆ ಪಡೆದಿದೆ. ಆದರೂ ಕೆಲವು ಆಟಗಾರರು ತವರಿಗೆ ಹಿಂತಿರುಗಲು ಒತ್ತಾಯಿಸಿದ್ದರಿಂದ ಬೋರ್ಡ್ ತೀವ್ರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನ ಪ್ರವಾಸವನ್ನು ಅರ್ಧದಲ್ಲೇ ಕೈಬಿಟ್ಟರೆ, ಆ ಆಟಗಾರರನ್ನು ಎರಡು ವರ್ಷಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ. ಇದರ ನಡುವೆ, ಬದಲಿ ಆಟಗಾರರನ್ನು ಕಳುಹಿಸಿ ಸರಣಿಯನ್ನು ಪೂರ್ಣಗೊಳಿಸುವುದಾಗಿ ಶ್ರೀಲಂಕಾ ಬೋರ್ಡ್ ಪಿಸಿಬಿಗೆ ತಿಳಿಸಿದೆ.
ಆಟಗಾರರ ಹಿಂತಿರುಗುವ ನಿರ್ಧಾರದಿಂದ ಗುರುವಾರ ನಡೆಯಬೇಕಿದ್ದ 2ನೇ ಏಕದಿನ ಪಂದ್ಯವನ್ನು ಮುಂದೂಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈ ಪಂದ್ಯವನ್ನು ಶುಕ್ರವಾರಕ್ಕೆ ಮತ್ತು ಮೂರನೇ ಪಂದ್ಯವನ್ನು ಭಾನುವಾರಕ್ಕೆ ಮರುನಿಗದಿಪಡಿಸಿದೆ.

