ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಟಿ20 ವಿಶ್ವಕಪ್‌ನಲ್ಲಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಈ ಮೆಗಾ ಟೂರ್ನಮೆಂಟ್‌ಗಾಗಿ “ಮೆನ್ ಇನ್ ಬ್ಲೂ” ವೈಟ್-ಬಾಲ್ ಸರಣಿಗಳ ಮೂಲಕ ಭರ್ಜರಿ ತಯಾರಿ ನಡೆಸುತ್ತಿದೆ. ಆದರೆ ಈ ನಡುವೆ, 2025ರ ಏಷ್ಯಾ ಕಪ್ ಸಮಯದಲ್ಲಿ ತಂಡಕ್ಕೆ ದೊಡ್ಡ ಆಘಾತ ನೀಡಿದ ಹಾರ್ದಿಕ್ ಪಾಂಡ್ಯ ಈಗ ಮತ್ತೆ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.
ಏಷ್ಯಾ ಕಪ್‌ನಲ್ಲಿ ಸ್ನಾಯು ಗಾಯಕ್ಕೊಳಗಾಗಿ ಪಾಕಿಸ್ತಾನ ವಿರುದ್ಧದ ಫೈನಲ್ ಹಾಗೂ ಆಸ್ಟ್ರೇಲಿಯಾ ಪ್ರವಾಸವನ್ನು ತಪ್ಪಿಸಿಕೊಂಡ ಹಾರ್ದಿಕ್, ಇದೀಗ ಚೇತರಿಸಿಕೊಂಡು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಎನ್‌ಸಿಎ)ಯಲ್ಲಿ ಫಿಟ್‌ನೆಸ್ ತರಬೇತಿಯಲ್ಲಿ ತೊಡಗಿಕೊಂಡಿದ್ದಾರೆ. ವರದಿಗಳ ಪ್ರಕಾರ, ನವೆಂಬರ್ 26 ರಂದು ಬಂಗಾಳ ವಿರುದ್ಧ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಆರಂಭಿಕ ಪಂದ್ಯಕ್ಕೆ ಅವರು ಸಂಪೂರ್ಣ ಫಿಟ್ ಆಗಲಿದ್ದಾರೆ.
ಹಾರ್ದಿಕ್ ಪಾಂಡ್ಯ, ಏಷ್ಯಾ ಕಪ್ ಬಳಿಕ ಮೊಟ್ಟ ಮೊದಲ ಬಾರಿಗೆ ಬರೋಡಾ ಪರ ಈ ದೇಶೀಯ ಟೂರ್ನಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ. ನಂತರ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡದಲ್ಲಿ ಮರುಪ್ರವೇಶ ಮಾಡುವ ನಿರೀಕ್ಷೆಯಿದೆ.

