ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪುಕೋಟೆ ಬಳಿ ನಡೆದ ಭೀಕರ ಕಾರ್ ಸ್ಫೋಟದ ಘಟನೆಯ ಕುರಿತು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಯಾವುದೇ ಸ್ಫೋಟ ಅಥವಾ ಭಯೋತ್ಪಾದಕ ದಾಳಿ ಸಂಭವಿಸಿದಾಗಲೂ ಕಾಂಗ್ರೆಸ್ ಪಕ್ಷವು ‘ತೀರಾ ಕೀಳುಮಟ್ಟದ ರಾಜಕೀಯ’ಕ್ಕೆ ಇಳಿಯುತ್ತದೆ ಎಂದು ಜೋಶಿ ಖಂಡಿಸಿದ್ದಾರೆ.
ದೆಹಲಿಯ ಸ್ಫೋಟದಿಂದ ಇಡೀ ರಾಷ್ಟ್ರ ತಲ್ಲಣಗೊಂಡಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸುವ ಬದಲು, “ಉಗ್ರರಿಗೆ ಹಾಸಿಗೆ ಹಾಸಿಕೊಟ್ಟಂತೆ” ವ್ಯತಿರಿಕ್ತ ಮತ್ತು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜೋಶಿ ಕಿಡಿಕಾರಿದ್ದಾರೆ.
ಜಮೀರ್ ಅಹ್ಮದ್‌ಗೆ ಜೋಶಿ ಚಾಟಿ:
ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಅವರನ್ನು ನಿರ್ದಿಷ್ಟವಾಗಿ ಗುರಿಯಾಗಿಸಿ ಮಾತನಾಡಿದ ಜೋಶಿ, “ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರ್ ಸ್ಫೋಟಕ್ಕೂ ಬಿಹಾರ ಚುನಾವಣೆಗೂ ಏನು ಸಂಬಂಧ?” ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರು “ಸ್ವಲ್ಪ ಸೂಕ್ಷ್ಮಮತೀಯರಾಗಿ ವರ್ತಿಸಲಿ. ಉಗ್ರರಿಗೆ ಇಂಬು ನೀಡುವಂತಹ ಬೇಜವಾಬ್ದಾರಿ ಹೇಳಿಕೆ, ಕೀಳುಮಟ್ಟದ ರಾಜಕೀಯ ಮಾಡುವುದನ್ನು ಬಿಡಬೇಕು,” ಎಂದು ತೀವ್ರವಾಗಿ ಚಾಟಿ ಬೀಸಿದ್ದಾರೆ.
ದೆಹಲಿಯಲ್ಲಿ ಕಾರ್ ಸ್ಫೋಟದಿಂದ 12 ಅಮಾಯಕರು ಮೃತಪಟ್ಟು ಹಲವರು ಗಾಯಗೊಂಡಿದ್ದರೂ, ಕಾಂಗ್ರೆಸ್ ನಾಯಕರು “ಜೀವದ ಬೆಲೆ ಅರಿಯದವರಂತೆ ಮಾತನಾಡುತ್ತಿರುವುದು” ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.
ತನಿಖೆಗೂ ಮುನ್ನವೇ ತೀರ್ಮಾನ:
ದೆಹಲಿ ಸ್ಫೋಟದ ಕುರಿತು ತನಿಖೆ ನಡೆಯುತ್ತಿದ್ದರೂ, ಕಾಂಗ್ರೆಸ್ ನಾಯಕರು ಮುಂಚಿತವಾಗಿಯೇ ತೀರ್ಮಾನಕ್ಕೆ ಬರುತ್ತಿದ್ದಾರೆ ಎಂದು ಜೋಶಿ ಹರಿಹಾಯ್ದಿದ್ದಾರೆ. ಬೆಂಗಳೂರು ಕೆಫೆ ಸ್ಫೋಟ, ಪೆಹಲ್ಗಾಮ್ ಭಯೋತ್ಪಾದನಾ ದಾಳಿ ಸೇರಿದಂತೆ ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರು “ಪಾಕಿಸ್ತಾನದ ಮಾದರಿಯಲ್ಲೇ” ಹೇಳಿಕೆಗಳನ್ನು ನೀಡುತ್ತಾರೆ ಎಂದು ಅವರು ದೂರಿದ್ದಾರೆ.

