ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಕಾರು ಸ್ಫೋಟ ಪ್ರಕರಣ ದೇಶಾದ್ಯಂತ ವ್ಯಾಪಕ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಅಲರ್ಟ್ ಘೋಷಿಸಿದ್ದು, ಈ ಘಟನೆ ನಾಲ್ಕುದಿನ ಕಳೆಯುವಷ್ಟರಲ್ಲೇ ಪಂಜಾಬ್‌ನ ಲುಧಿಯಾನಾದಲ್ಲಿ ಪಾಕಿಸ್ತಾನ ಬೆಂಬಲಿತ ಮತ್ತೊಂದು ಉಗ್ರರ ಜಾಲ ಪತ್ತೆಯಾಗಿದೆ.
ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪಂಜಾಬ್‌ನ ಪೊಲೀಸರು ಪಾಕ್ ಬೆಂಬಲಿತ ಐಎಸ್‌ಐನ ಗ್ರೆನೇಡ್ ದಾಳಿ ಮಾಡ್ಯೂಲ್ ಅನ್ನು ಭೇದಿಸಿದ್ದಾರೆ. ಲುಧಿಯಾನ ಕಮಿಷನರೇಟ್ ಪೊಲೀಸರು ಐಎಸ್‌ಐ-ಪಾಕಿಸ್ತಾನ ಬೆಂಬಲಿತ ಗ್ರೆನೇಡ್ ದಾಳಿ ಮಾಡ್ಯೂಲ್ ಅನ್ನು ಭೇದಿಸಿದ್ದು, 10 ಮಂದಿ ಶಂಕಿತ ಉಗ್ರರನ್ನ ಬಂಧಿಸಲಾಗಿದೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಗಳು ಮಲೇಷ್ಯಾ ಮೂಲದ ಮೂವರು ವ್ಯಕ್ತಿಗಳ ಮೂಲಕ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳನ್ನ ಸಂಪರ್ಕಿಸಿದ್ದರು. ಹ್ಯಾಂಡ್ ಗ್ರೆನೇಡ್‌ಗಳನ್ನ ಪಡೆದು ಬೇರೆಡೆಗೆ ತಲುಪಿಸುತ್ತಿದ್ದರು. ಪಂಜಾಬ್ ರಾಜ್ಯದ ಜನನಿಬಿಡ ಪ್ರದೇಶಗಳಲ್ಲಿ ಗ್ರೆನೇಡ್ ದಾಳಿ ನಡೆಸುವ ಮೂಲಕ ಅಶಾಂತಿ ಸೃಷ್ಟಿಸಲು ಹೊಂಚುಹಾಕಿದ್ದರು ಎಂದು ಡಿಜಿಪಿ ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

