ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯೆಲ್ ಅವರನ್ನು ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ಹಾಗೂ ಕರ್ನಾಟಕದ ಹಿರಿಯ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ಮಾಡಿ, ರಾಜ್ಯದ ಕೈಗಾರಿಕಾ ಕ್ಷೇತ್ರದ ಭವಿಷ್ಯಕ್ಕೆ ಮಹತ್ವದ ತಿರುವು ನೀಡಬಲ್ಲ ‘ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಮನವಿ ಸಲ್ಲಿಸಿದರು.
ಕರ್ನಾಟಕದ ಸಮಗ್ರ ಪ್ರಾದೇಶಿಕ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿರುವ ಈ ಮಹತ್ವಾಕಾಂಕ್ಷಿ ಕಾರಿಡಾರ್ ಯೋಜನೆ, ರಾಜ್ಯದ ಪ್ರಮುಖ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಅನ್ನು ಒಳಗೊಂಡಿದೆ.
ಸಮೃದ್ಧ ಕೈಗಾರಿಕಾ ಕ್ಷೇತ್ರ ಹೊಂದಿರುವ ಕರ್ನಾಟಕದಲ್ಲಿ, ಈ ಹೊಸ ಯೋಜನೆಯ ಚೌಕಟ್ಟಿನಡಿಯಲ್ಲಿ ಕೈಗಾರಿಕಾ ಪಾರ್ಕ್ಗಳನ್ನು ಸ್ಥಾಪಿಸುವ ಕುರಿತು ಸಚಿವ ಕುಮಾರಸ್ವಾಮಿ ಮತ್ತು ಗೋಯೆಲ್ ನಡುವೆ ಸುದೀರ್ಘ ಚರ್ಚೆ ನಡೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಾದೇಶಿಕ ಅಭಿವೃದ್ಧಿಯ ಸಂಕಲ್ಪಕ್ಕೆ ಅನುಗುಣವಾಗಿ, ಈ ಕಾರಿಡಾರ್ ಯೋಜನೆಯು ಸಾಗಾಣಿಕೆಯ ಮೂಲಸೌಕರ್ಯವನ್ನು ಗಣನೀಯವಾಗಿ ಹೆಚ್ಚಿಸಿ, ರಾಜ್ಯದ ಉದ್ದಗಲಕ್ಕೂ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮಹತ್ವದ ಕೊಡುಗೆ ನೀಡುತ್ತದೆ ಎಂದು ಕುಮಾರಸ್ವಾಮಿ ಅವರು ಗೋಯೆಲ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಈ ಯೋಜನೆಯ ಅನುಷ್ಠಾನದಿಂದ ಸರಕು ಸಾಗಾಣಿಕೆ ಸುಲಭವಾಗಿ, ಕೈಗಾರಿಕಾ ಪ್ರಗತಿಗೆ ಹೊಸ ವೇಗ ಸಿಗಲಿದೆ. ಉದ್ದೇಶಿತ ಜಿಲ್ಲೆಗಳು ಕೇವಲ ಕೈಗಾರಿಕಾ ಅಭಿವೃದ್ಧಿಯ ಕೇಂದ್ರಗಳಾಗಿ ಹೊರಹೊಮ್ಮುವುದಲ್ಲದೆ, ರಾಜ್ಯದ ಆರ್ಥಿಕತೆಯಲ್ಲಿ ಸಮತೋಲಿತ ಪ್ರಾದೇಶಿಕ ಬೆಳವಣಿಗೆಗೆ ಶಕ್ತಿ ತುಂಬುತ್ತವೆ ಎಂದು ಕುಮಾರಸ್ವಾಮಿ ಅವರು ಚರ್ಚೆಯ ವೇಳೆ ಒತ್ತಿ ಹೇಳಿದರು.

