ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಕಾರು ಸ್ಫೋಟದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ‘ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ನಿವಾಸಿಯೂ ಭಯೋತ್ಪಾದಕ ಅಥವಾ ಉಗ್ರರೊಂದಿಗೆ ಸಂಬಂಧ ಹೊಂದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.
‘ದೆಹಲಿಯಲ್ಲಿ ಉಗ್ರರ ಕೃತ್ಯವನ್ನು ಎಷ್ಟು ಖಂಡಿಸಿದರೂ ಸಾಕಾಗುವುದಿಲ್ಲ. ಈ ರೀತಿ ಅಮಾಯಕ ಜನರನ್ನು ಕೊಲ್ಲುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಯಾವುದೇ ಧರ್ಮವು ಅಂತಹ ಕೃತ್ಯಗಳನ್ನು ಅನುಮತಿಸುವುದಿಲ್ಲ. ತನಿಖೆ ನಡೆಯುತ್ತಿದೆ ಮತ್ತು ಎಲ್ಲಾ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಒಮರ್ ಅಬ್ದುಲ್ಲಾ ಅವರು ಜಮ್ಮುವಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದ ಪ್ರತಿಯೊಬ್ಬ ನಿವಾಸಿಯೂ ಭಯೋತ್ಪಾದಕರಲ್ಲ. ಆದರೆ ಇಲ್ಲಿ ಯಾವಾಗಲೂ ಶಾಂತಿ ಮತ್ತು ಸಹೋದರತ್ವವನ್ನು ಭಂಗಗೊಳಿಸಲು ಕೆಲವೇ ಕೆಲವು ಜನ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ನಾವು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ನಿವಾಸಿ ಮತ್ತು ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮರನ್ನು ಒಂದೇ ಸಿದ್ಧಾಂತದಿಂದ ನೋಡಲು ಪ್ರಾರಂಭಿಸಿದಾಗ ಮತ್ತು ಅವರಲ್ಲಿ ಪ್ರತಿಯೊಬ್ಬರೂ ಭಯೋತ್ಪಾದಕ ಎಂದು ಭಾವಿಸಿದಾಗ, ಜನರನ್ನು ಸರಿಯಾದ ಹಾದಿಯಲ್ಲಿ ಇಡುವುದು ಕಷ್ಟ ಎಂದು ಸಿಎಂ ಹೇಳಿದರು.
ಸ್ಫೋಟಕ್ಕೆ ಕಾರಣರಾದವರನ್ನು ಗುರುತಿಸುವುದು ಮತ್ತು ಶಿಕ್ಷಿಸುವುದು ಅಗತ್ಯವಾಗಿದ್ದರೂ ಮುಗ್ಧ ಜನರನ್ನು ಅನುಮಾನಿಸಬಾರದು ಮತ್ತು ನಿಂದಿಸಬಾರದು ಎಂದು ಒಮರ್ ತಿಳಿಸಿದ್ದಾರೆ.

