ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸರ್ಕಾರವು 2026ನೇ ಸಾಲಿಗೆ ಸಂಬಂಧಿಸಿದಂತೆ ಸರ್ಕಾರಿ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಾರ್ವತ್ರಿಕ ರಜಾ ಪಟ್ಟಿಗೆ ಅನುಮೋದನೆ ನೀಡಲಾಗಿದ್ದು, ರಾಷ್ಟ್ರೀಯ ಹಬ್ಬಗಳು ಮತ್ತು ನಾಡಿನ ಪ್ರಮುಖ ಹಬ್ಬಗಳು ಸೇರಿದಂತೆ ಒಟ್ಟು 20 ದಿನಗಳ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ.
ಈ ರಜಾ ದಿನಗಳು ಮುಂದಿನ ವರ್ಷ ರಾಜ್ಯದ ಎಲ್ಲಾ ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ಅನ್ವಯವಾಗಲಿವೆ.
📅 2026ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ:
| ದಿನಾಂಕ | ವಾರ | ಹಬ್ಬ/ದಿನಾಚರಣೆ |
| 15.01.2026 | ಗುರುವಾರ | ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ |
| 26.01.2026 | ಸೋಮವಾರ | ಗಣರಾಜ್ಯೋತ್ಸವ |
| 19.03.2026 | ಗುರುವಾರ | ಯುಗಾದಿ ಹಬ್ಬ |
| 21.03.2026 | ಶನಿವಾರ | ಖುತುಬ್-ಎ-ರಂಜಾನ್ |
| 31.03.2026 | ಮಂಗಳವಾರ | ಮಹಾವೀರ ಜಯಂತಿ |
| 03.04.2026 | ಶುಕ್ರವಾರ | ಗುಡ್ ಫ್ರೈಡೇ |
| 14.04.2026 | ಮಂಗಳವಾರ | ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ |
| 20.04.2026 | ಸೋಮವಾರ | ಬಸವ ಜಯಂತಿ, ಅಕ್ಷಯ ತೃತೀಯ |
| 01.05.2026 | ಶುಕ್ರವಾರ | ಕಾರ್ಮಿಕ ದಿನಾಚರಣೆ |
| 28.05.2026 | ಗುರುವಾರ | ಬಕ್ರೀದ್ |
| 26.06.2026 | ಶುಕ್ರವಾರ | ಮೊಹರಂ ಕಡೆ ದಿನ |
| 15.08.2026 | ಶನಿವಾರ | ಸ್ವಾತಂತ್ರ್ಯ ದಿನಾಚರಣೆ |
| 26.08.2026 | ಬುಧವಾರ | ಈದ್-ಮಿಲಾದ್ |
| 14.09.2026 | ಸೋಮವಾರ | ವರಸಿದ್ಧಿ ವಿನಾಯಕ ವ್ರತ |
| 02.10.2026 | ಶುಕ್ರವಾರ | ಗಾಂಧಿ ಜಯಂತಿ |
| 20.10.2026 | ಮಂಗಳವಾರ | ಮಹಾನವಮಿ, ಆಯುಧಪೂಜೆ |
| 21.10.2026 | ಬುಧವಾರ | ವಿಜಯದಶಮಿ |
| 10.11.2026 | ಮಂಗಳವಾರ | ಬಲಿಪಾಡ್ಯಮಿ, ದೀಪಾವಳಿ |
| 27.11.2026 | ಶುಕ್ರವಾರ | ಕನಕದಾಸ ಜಯಂತಿ |
| 25.12.2026 | ಶುಕ್ರವಾರ | ಕ್ರಿಸ್ ಮಸ್ |
ಕೆಲವು ಹಬ್ಬಗಳಿಗೆ ರಜೆ ಮಿಸ್: ಕೊಡಗಿಗೆ ವಿಶೇಷ ರಜೆ
ಈ 20 ದಿನಗಳ ಪಟ್ಟಿಯಲ್ಲಿ ಮಹಾ ಶಿವರಾತ್ರಿ (ಫೆಬ್ರವರಿ 15), ಮಹರ್ಷಿ ವಾಲ್ಮೀಕಿ ಜಯಂತಿ (ಅಕ್ಟೋಬರ್ 25), ಕನ್ನಡ ರಾಜ್ಯೋತ್ಸವ (ನವೆಂಬರ್ 01) ಹಾಗೂ ನರಕ ಚತುರ್ದಶಿ (ನವೆಂಬರ್ 08) ಹಬ್ಬಗಳು ಭಾನುವಾರದಂದು ಬಂದ ಕಾರಣ ಅವುಗಳನ್ನು ರಜಾ ಪಟ್ಟಿಯಲ್ಲಿ ನಮೂದಿಸಲಾಗಿಲ್ಲ. ಅದೇ ರೀತಿ, ಎರಡನೇ ಶನಿವಾರದಂದು ಬಂದ ಮಹಾಲಯ ಅಮವಾಸ್ಯೆ (ಅಕ್ಟೋಬರ್ 10) ಸಹ ಪಟ್ಟಿಯಿಂದ ಹೊರಗುಳಿದಿದೆ.
ಇನ್ನು, ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಮೂರು ದಿನಗಳ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಆ ದಿನಗಳು:
ಕ್ರೈಲ್ ಮೂಹೂರ್ತ: 03.09.2026 (ಗುರುವಾರ)
ತುಲಾ ಸಂಕ್ರಮಣ: 18.10.2026 (ಭಾನುವಾರ)
ಹುತ್ತರಿ ಹಬ್ಬ: 26.11.2026 (ಗುರುವಾರ)
ಮುಸ್ಲಿಂ ಹಬ್ಬಗಳಿಗೆ ಹೊಂದಾಣಿಕೆ ರಜೆ
ಮುಸಲ್ಮಾನರ ಹಬ್ಬಗಳಿಗೆ ಘೋಷಿಸಲಾದ ರಜಾದಿನಗಳು ನಿಗದಿತ ದಿನಾಂಕದಂದು ಬರದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸವೇ ರಜಾ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವತ್ರಿಕ ರಜಾ ದಿನಗಳಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಲ್ಪಡಲಿದ್ದು, ತುರ್ತು ಕೆಲಸಗಳನ್ನು ವಿಲೇವಾರಿ ಮಾಡಲು ಇಲಾಖಾ ಮುಖ್ಯಸ್ಥರು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

