ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ಬೆನ್ನಲ್ಲೇ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದು, ಪೂರ್ವ ಗಡಿಯಲ್ಲಿ ಭಾರತ ಮತ್ತು ಪಶ್ಚಿಮ ಗಡಿಯಲ್ಲಿ ಅಫ್ಘಾನ್ ತಾಲಿಬಾನ್ ವಿರುದ್ಧ ‘ಎರಡು ಮುಂಚೂಣಿ ಯುದ್ಧಕ್ಕೆ’ ತಮ್ಮ ದೇಶವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಸ್ಫೋಟಕ್ಕೆ ಭಾರತವೇ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಸಿಫ್, ನಾವು ಎರಡು ಕಡೆಯಲ್ಲಿ ಯುದ್ಧಕ್ಕೆ ಸಿದ್ಧರಿದ್ದೇವೆ. ಪೂರ್ವ (ಭಾರತ) ಮತ್ತು ಪಶ್ಚಿಮ ಗಡಿ (ಅಫ್ಘಾನಿಸ್ತಾನ) ಎರಡನ್ನೂ ಎದುರಿಸಲು ನಾವು ಸಿದ್ಧರಿದ್ದೇವೆ. ಮೊದಲ ಸುತ್ತಿನಲ್ಲಿ ಅಲ್ಲಾಹನು ನಮಗೆ ಸಹಾಯ ಮಾಡಿದನು ಮತ್ತು ಎರಡನೇ ಸುತ್ತಿನಲ್ಲಿಯೂ ಅವನು ನಮಗೆ ಸಹಾಯ ಮಾಡುತ್ತಾನೆ ಎಂದು ಹೇಳಿದ್ದಾರೆ.
ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿ 36 ಜನರು ಗಾಯಗೊಂಡ ನಂತರ ಆಸಿಫ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.
ದೆಹಲಿ ಕಾರು ಸ್ಫೋಟದ ಕುರಿತು ವಿವಾದಾತ್ಮಕ ಹೇಳಿಕೆ
ದೆಹಲಿಯ ರೆಡ್ ಫೋರ್ಟ್ ಬಳಿ 13 ಜನರನ್ನು ಬಲಿ ತೆಗೆದುಕೊಂಡ ಕಾರು ಸ್ಫೋಟದ ಕುರಿತ ಅವರ ವಿವಾದಾತ್ಮಕ ಹೇಳಿಕೆಗಳ ಬೆನ್ನಲ್ಲೇ ಆಸಿಫ್ ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ರೆಡ್ ಫೋರ್ಟ್ ಬಳಿಯ ಸ್ಫೋಟವನ್ನು ಅವರು ಕೇವಲ ‘ಗ್ಯಾಸ್ ಸಿಲಿಂಡರ್ ಸ್ಫೋಟ’ ಎಂದು ಲಘುವಾಗಿ ಪರಿಗಣಿಸಿ, ಭಾರತವು ‘ಘಟನೆಯನ್ನು ರಾಜಕೀಯಗೊಳಿಸುತ್ತಿದೆ’ ಎಂದು ಆರೋಪಿಸಿದ್ದರು.’ನಿನ್ನೆ ಮೊನ್ನೆಯವರೆಗೆ ಅದು ಗ್ಯಾಸ್ ಸಿಲಿಂಡರ್ ಸ್ಫೋಟವಾಗಿತ್ತು. ಈಗ ಅವರು ಅದನ್ನು ವಿದೇಶಿ ಪಿತೂರಿ ಎಂದು ಹಣೆಪಟ್ಟಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಭಾರತವು ಶೀಘ್ರದಲ್ಲೇ ಅದರ ಹೊಣೆಯನ್ನು ಪಾಕಿಸ್ತಾನದ ಮೇಲೆ ಹಾಕಬಹುದು”‘ ಎಂದು ಆಸಿಫ್ ಹೇಳಿದ್ದರು.

