ಚಳಿಗಾಲದಲ್ಲಿ ದೋಸೆ ಅಥವಾ ಇಡ್ಲಿ ಹಿಟ್ಟು ಹುಡುಗಿಸುವುದೇ ಒಂದು ಸವಾಲು. ಸಮಯಕ್ಕೆ ಮುಂಚೆ ನೆನೆಸದೆಬಿಟ್ಟರೆ, ಬೆಳಗಿನ ಉಪಹಾರಕ್ಕೆ ಏನು ಮಾಡೋದು ಎಂಬ ಪ್ರಶ್ನೆ ಬರುತ್ತದೆ. ಆದರೆ ಮನೆಯಲ್ಲೇ ಇರುವ ಸರಳ ವಿಧಾನಗಳಿಂದ ಹಿಟ್ಟನ್ನು ಬೇಗನೆ ಹುದುಗಿಸಬಹುದು.
ಪ್ರೆಶರ್ ಕುಕ್ಕರ್ ಟ್ರಿಕ್:
ದೋಸೆ-ಇಡ್ಲಿ ಹಿಟ್ಟನ್ನು ಬೇಗ ಹುದುಗಿಸಲು ಪ್ರೆಶರ್ ಕುಕ್ಕರ್ ಅತಿ ಪರಿಣಾಮಕಾರಿ.
ರುಬ್ಬಿದ ಹಿಟ್ಟಿಗೆ ಅಗತ್ಯ ಪ್ರಮಾಣದ ಉಪ್ಪು ಸೇರಿಸಿ ಪಾತ್ರೆಗೆ ಸುರಿಯಿರಿ. ಖಾಲಿ ಕುಕ್ಕರ್ ಅನ್ನು ಸ್ಟೌವ್ ಮೇಲೆ ಸ್ವಲ್ಪ ಬಿಸಿ ಮಾಡಿ. ಈಗ ಅದರೊಳಗೆ ಹಿಟ್ಟಿನ ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ. ಕುಕ್ಕರ್‌ಗೆ ಶಿಳ್ಳೆ ಹಾಕದೇ ಐದು ನಿಮಿಷ ಕಡಿಮೆ ಉರಿಯಲ್ಲಿ ಇಡಿ. ನಂತರ ಸ್ಟೌವ್ ಆಫ್ ಮಾಡಿ. ಕುಕ್ಕರ್ ಒಳಗಿನ ಶಾಖವೇ ಹಿಟ್ಟನ್ನು ಒಂದು ಗಂಟೆಯೊಳಗೆ ಚೆನ್ನಾಗಿ ಹುದುಗಿಸುತ್ತದೆ.
ಹಿಟ್ಟಿಗೆ ‘ಫಾಸ್ಟ್ ಫರ್ಮೆಂಟೇಷನ್’ ಮಿಕ್ಸ್ ಸೇರಿಸಿ:
ಸ್ವಲ್ಪ ಪದಾರ್ಥಗಳು ಹಿಟ್ಟಿನ ಹುದುಗುವಿಕೆಯನ್ನು ವೇಗಗೊಳಿಸುತ್ತವೆ.
ಹಿಟ್ಟಿಗೆ ಕಲ್ಲು ಉಪ್ಪು ಸೇರಿಸಿ. ½ ಟೀ ಸ್ಪೂನ್ ಮೊಸರು, ¼ ಟೀ ಸ್ಪೂನ್ ಸಕ್ಕರೆ, ¼ ಟೀ ಸ್ಪೂನ್ ನಿಂಬೆ ರಸ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಬಿಗಿಯಾಗಿ ಮುಚ್ಚಿ. ಈ ಪಾತ್ರೆಯನ್ನು ಬಿಸಿ ಒಲೆ ಹತ್ತಿರ ಅಥವಾ ಬೇರೆ ಯಾವುದೇ ಬೆಚ್ಚಗಿನ ಸ್ಥಳದಲ್ಲಿ ಇಟ್ಟರೆ ಸುಮಾರು ಒಂದು ಗಂಟೆಯಲ್ಲಿ ಹಿಟ್ಟು ಮೇಲೇಳುತ್ತದೆ.
ಸರಿಯಾದ ಪಾತ್ರೆ ಬಳಕೆ – ಹುದುಗುವಿಕೆ ಹೆಚ್ಚು ವೇಗ:
ಹಿಟ್ಟನ್ನು ಯಾವ ಪಾತ್ರೆಯಲ್ಲಿ ಇಡುತ್ತೀರಿ ಎನ್ನುವುದೂ ಬಹಳ ಮುಖ್ಯ.
ಪ್ಲಾಸ್ಟಿಕ್ ಪಾತ್ರೆಗಳ ಬದಲಿಗೆ ಸ್ಟೇನ್‌ಲೆಸ್ ಸ್ಟೀಲ್ ಅಥವಾ ಮಣ್ಣಿನ ಪಾತ್ರೆಗಳು ಬಳಸುವುದು ಉತ್ತಮ. ಇವು ಶಾಖವನ್ನು ಸಮವಾಗಿ ಹಿಡಿದುಕೊಳ್ಳುವುದರಿಂದ ಹಿಟ್ಟು ಬೇಗನೆ ಹುದುಗುತ್ತದೆ. ಜೊತೆಗೆ ಆರೋಗ್ಯಕ್ಕೂ ಸುರಕ್ಷಿತ.
ಬೆಚ್ಚಗಿನ ಸ್ಥಳದ ಟ್ರಿಕ್:
ಬೆಚ್ಚಗಿನ ಸ್ಥಳದಲ್ಲಿ ಹಿಟ್ಟನ್ನು ಇಡುವುದು ಉತ್ತಮ ವಿಧಾನ.
ಗ್ಯಾಸ್ ಸಿಲಿಂಡರ್ ಪಕ್ಕದಲ್ಲಿನ ತಾಪಮಾನ, ಓವನ್ ಒಳಗಿನ ‘ಲೈಟ್’ ಆನ್ ಮಾಡಿರುವ ಸ್ಥಿತಿ, ಅಥವಾ ಬಿಸಿ ನೀರಿನ ಪಾತ್ರೆಯ ಹತ್ತಿರ ಹಿಟ್ಟನ್ನು ಇರಿಸಿದರೆ ಬೇಗನೆ ಹುದುಗುತ್ತದೆ.
ಮೇಲಿನ ವಿಧಾನಗಳು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಲು ಉತ್ತಮ. ಸ್ವಾಭಾವಿಕವಾಗಿ 4–7 ಗಂಟೆಗಳ ಫರ್ಮೆಂಟೇಷನ್ ಆಗುವುದು ಜೀರ್ಣಕ್ರಿಯೆಗೆ, ರುಚಿಗೆ ಮತ್ತು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು.

