Friday, November 14, 2025

ಕೈತಪ್ಪಿ ಚಾರ್ಜರ್ ಬಿದ್ದಿದ್ದು: ಅದಕ್ಕೆ ಆ ಯಪ್ಪಾ ಹೀಗಾ ಮಾಡೋದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಮೆಟ್ರೋನಲ್ಲಿ ವಿಚಿತ್ರ ಘಟನೆಗಳು ನಡೆಯುವುದೇ ಹೊಸದೇನಲ್ಲ. ಜನಸಂದಣಿ ತುಂಬಿರುವ ಟ್ರೇನ್‌ನಲ್ಲಿ ಪ್ರಯಾಣಿಕರ ನಡುವೆ ಆಗುವ ಸಣ್ಣ ಘಟನೆಗಳೇ ಕೆಲವೊಮ್ಮೆ ದೊಡ್ಡ ವಿವಾದಕ್ಕೆ ಕಾರಣವಾಗುತ್ತವೆ. ಇತ್ತೀಚೆಗೆ ನಡೆದ ಒಂದು ಘಟನೆ ರೆಡ್ಡಿಟ್‌ನಲ್ಲಿ ಹಂಚಿಕೊಂಡ ಕ್ಷಣದಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಯಾಣಿಕನೊಬ್ಬ ಮೆಟ್ರೋ ತುಂಬಿ ತುಳುಕುತ್ತಿದ್ದಾಗ ಫೋನ್ ಚಾರ್ಜ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ಚಾರ್ಜ್ ಪಾಯಿಂಟ್ ಬಳಿಗೆ ಹೋಗಿ ಪ್ಲಗ್ ಹಾಕುವ ವೇಳೆ ಅವನ ಚಾರ್ಜರ್ ತಪ್ಪಿ ಪಕ್ಕದಲ್ಲೇ ಕುಳಿತಿದ್ದ ಹಿರಿಯ ನಾಗರಿಕರ ಮೇಲೆ ಬಿದ್ದಿದೆ. ತಕ್ಷಣವೇ ಯುವಕ “ಕ್ಷಮಿಸಿ ಸರ್” ಎಂದು ಹೇಳಿದ್ದರೂ, ಹಿರಿಯ ನಾಗರಿಕರು ಕೋಪಗೊಂಡು ಜೋರಾಗಿ ಕಪಾಳಮೋಕ್ಷ ಮಾಡಿದ್ದಾರೆ. ಅಸಮಾಧಾನಗೊಂಡ ಯುವಕ “ಏನಾಗಿದೆ ನಿಮಗೆ?” ಎಂದು ಧ್ವನಿ ಏರಿಸಿದಾಗ, ಪರಿಸ್ಥಿತಿ ಗಂಭೀರವಾಗದಂತೆ ಮತ್ತೊಬ್ಬ ಪ್ರಯಾಣಿಕ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ರೆಡ್ಡಿಟ್ ಪೋಸ್ಟ್‌ನಲ್ಲಿ ಯುವಕ, “ನನ್ನ ತಪ್ಪು ಎನ್ನುವುದನ್ನು ಒಪ್ಪಿಕೊಂಡಿದ್ದೇನೆ. ಅದಕ್ಕಾಗಿಯೇ ಕ್ಷಮೆ ಕೇಳಿದ್ದೇನೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಇಷ್ಟು ಅವಮಾನ ಮಾಡುವ ಅಗತ್ಯವಿತ್ತೇ?” ಎಂದು ಬೇಸರ ವ್ಯಕ್ತಪಡಿಸಿದ್ದಾನೆ.

ಈ ಘಟನೆಯ ನಂತರ ನೆಟ್ಟಿಗರು ಭಾರೀ ಪ್ರತಿಕ್ರಿಯೆ ನೀಡಿ ಹಿರಿಯ ನಾಗರಿಕರ ವರ್ತನೆಯನ್ನು ಟೀಕಿಸಿದ್ದಾರೆ. “ಕ್ಷಮೆ ಕೇಳಿದ ಮೇಲೂ ಹೀಗೆ ವರ್ತಿಸುವುದು ಸರಿಯಲ್ಲ,” ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, “ಕೆಲವರು ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳುವುದಿಲ್ಲ; ಇಂತಹ ಘಟನೆಗಳು ಬಸ್, ರೈಲು, ವಿಮಾನ ಎಲ್ಲೆಡೆ ನಡೆಯುತ್ತವೆ,” ಎಂದು ಮತ್ತೊಬ್ಬರು ಹೇಳಿದ್ದಾರೆ.

error: Content is protected !!