ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಸರ ಪ್ರೇಮಿಗಳ ಬಗ್ಗೆ ಮಾತನಾಡುವಾಗ ಮೊದಲಿಗೆ ನೆನ್ಪಾಗೋ ಹೆಸರು ಸಾಲುಮರದ ತಿಮ್ಮಕ್ಕ. “ವೃಕ್ಷಮಾತೆ” ಎಂದೇ ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಈ ಮಹಾತಾಯಿ, ಇಂದು ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ 114ನೇ ವಯಸ್ಸಿನಲ್ಲಿ ವಿಧಿವಶರಾದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಹುಟ್ಟಿದ ತಿಮ್ಮಕ್ಕ ಬಾಲ್ಯದಿಂದಲೇ ಕಷ್ಟದ ಬದುಕನ್ನು ಕಂಡವರು. ಬಡ ಕುಟುಂಬ, ಶಾಲೆಯ ಅವಕಾಶ ಇರದಿದ್ದರೂ ದುಡಿಮೆ ಮನೋಭಾವ ಕಳೆದುಕೊಳ್ಳಲಿಲ್ಲ. ಮದುವೆಯಾದರೂ ಮಕ್ಕಳಿಲ್ಲದ ನೋವನ್ನು ಅವರು ಮರಗಳನ್ನು ಬೆಳೆಸುವ ಮೂಲಕ ಮರೆತರು. ಗಂಡ ಚಿಕ್ಕಯ್ಯ ಜೊತೆಗೂಡಿ ರಾಜ್ಯ ಹೆದ್ದಾರಿ ಬದಿಯಲ್ಲಿ ಸಸಿಗಳನ್ನು ನೆಟ್ಟು, ನಾಲ್ಕು ಕಿಲೋಮೀಟರ್ ಪ್ರದೇಶದಲ್ಲಿ ಸಾಲುಸಾಲಾಗಿ ಆಲದ ಮರಗಳನ್ನು ಬೆಳೆಸಿದರು. 8000ಕ್ಕೂ ಹೆಚ್ಚು ಸಸಿಗಳು ಇಂದು 15 ಲಕ್ಷ ರೂ. ಮೌಲ್ಯದ ಆಸ್ತಿಯಾಗಿದೆ.
ಗಂಡನ ಸಾವಿನ ನಂತರವೂ ತಿಮ್ಮಕ್ಕ ಮರಗಳ ಜತೆ ಜೀವನ ಸಾಗಿಸಿದರು. ಆಲದ ಮರಗಳನ್ನು ಕಡಿಯುವ ಯೋಜನೆ ಬಂದಾಗ ಸರ್ಕಾರವೇ ಅವರ ಮಾತಿಗೆ ತಲೆಬಾಗಿತ್ತು. ಪರಿಸರ ಸಂರಕ್ಷಣೆಯಲ್ಲಿ ಅವರ ಧೈರ್ಯಶಾಲಿ ಹೋರಾಟ ಗಮನ ಸೆಳೆದಿತ್ತು. ಪದ್ಮಶ್ರೀ, ನಾಡೋಜ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರ ಕೀರ್ತಿಗೆ ಸೇರಿವೆ. ಅಮೇರಿಕಾದ ಪರಿಸರ ಸಂಸ್ಥೆಗೆ ಅವರ ಹೆಸರನ್ನೇ ಇಡಲಾಗಿದೆ.
ತಮ್ಮ ಶತಾಯುಷ ವಯಸ್ಸಿನಲ್ಲೂ ಪರಿಸರ ಜಾಗೃತಿ ಹರಡಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಜೀವನ ಅನೇಕ ಯುವಕರಿಗೆ ಪ್ರೇರಣೆಯಾಗಿದೆ. ಅವರ ಸೇವೆ, ಅವರ ಹೋರಾಟ ಮತ್ತು ಮರಗಳ ಮೇಲೆ ಹೊಂದಿದ್ದ ಅಸೀಮ ಪ್ರೀತಿ ಎಂದಿಗೂ ಮರೆಯಲಾಗದು.

