ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಮಹೀಂದ್ರಾ XUV 700 ಕಾರು ಕಂದಕಕ್ಕೆ ಬಿದ್ದ ಪರಿಣಾಮ ಓರ್ವ ಬಾಲಕ ಸೇರಿದಂತೆ ಒಟ್ಟು ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಿನ್ನೆ (ನವೆಂಬರ್ 13) ಬೆಳಿಗ್ಗೆ 7 ಗಂಟೆ ಸುಮಾರಿಗೆ ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇಯಲ್ಲಿನ ಭೀಮಪುರ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. MHO3 EL 1388 ನಂಬರಿನ XUV 700 ಕಾರು ದೆಹಲಿಯಿಂದ ಗುಜರಾತ್ನತ್ತ ವೇಗವಾಗಿ ಸಾಗುತ್ತಿತ್ತು. ಈ ವೇಳೆ, ಕಾರು ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ದಾಟಿ, ರಸ್ತೆಯ ಮಧ್ಯಭಾಗದಲ್ಲಿದ್ದ ಮಾಹಿ ನದಿಯ ಕಂದಕಕ್ಕೆ ಉರುಳಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ: ಅತಿ ವೇಗದಿಂದ ಬಂದ ಕಾರು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬೀಳುವ ಭೀಕರ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಮತ್ತು ಮೇಲ್ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನದ ನಂಬರ್ ಪ್ಲೇಟ್ ಕೂಡ ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.
ಮೃತರ ವಿವರ:
ಅಪಘಾತದಲ್ಲಿ ಮೃತಪಟ್ಟವರನ್ನು ಮುಂಬೈನ ಕುರ್ಲಾ ನಿವಾಸಿಗಳಾದ: ಗುಲಾಮ್ ರಸೂಲ್ (70) ಅಬ್ದುಲ್ ಗುಲಾಮ್ (35) ಡ್ಯಾನಿಶ್ (15) ಹಾಗೂ, ದುರ್ಗೇಶ್ ಪ್ರಸಾದ್ (35) ಮತ್ತು ವಡೋದರಾದ ಖಾಲಿಸ್ (35) ಎಂದು ಗುರುತಿಸಲಾಗಿದೆ. ಈ ದುರಂತದಲ್ಲಿ ಓರ್ವ ಬಾಲಕ ಸೇರಿ ಐವರು ಸಾವನ್ನಪ್ಪಿರುವುದು ಭಾರೀ ದುಃಖಕ್ಕೆ ಕಾರಣವಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಕಂದಕದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಎಕ್ಸ್ಪ್ರೆಸ್ ವೇಗಳಲ್ಲಿ ಅತಿ ವೇಗದ ಚಾಲನೆಯು ಇಂತಹ ಭೀಕರ ದುರಂತಗಳಿಗೆ ಹೇಗೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ.

