Friday, November 14, 2025

ಬಿಹಾರದ ವಿಜಯೋತ್ಸವ: ‘ಕೈ’ ಪಾಳಯದಲ್ಲಿ ತಣ್ಣೀರ ಸಿಂಚನ; ಕಾಂಗ್ರೆಸ್ ಪ್ರಯೋಗಗಳಿಗೆ ಬ್ರೇಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ನಾಯಕತ್ವದ ಅಡಿಯಲ್ಲಿ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವು ಮಹಾಘಟಬಂಧನ್ ಅನ್ನು ಬಹುತೇಕ ವೈಟ್‌ವಾಷ್ ಮಾಡಿದೆ. ಬಿಜೆಪಿಯು ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಫಲಿತಾಂಶದ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಕೀಯದಲ್ಲಿ ಸಂಭವಿಸಬಹುದಾದ ಬೆಳವಣಿಗೆಗಳ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ.

ಹೈಕಮಾಂಡ್ ಉತ್ಸಾಹಕ್ಕೆ ತಣ್ಣೀರು

ಬಿಹಾರದಲ್ಲಿ ಮಹಾಘಟಬಂಧನ್ ಗೆದ್ದಿದ್ದರೆ, ಕಾಂಗ್ರೆಸ್ ಹೈಕಮಾಂಡ್‌ಗೆ ಹೊಸ ಹುರುಪು ಬರುತ್ತಿತ್ತು. ಇದೇ ಉತ್ಸಾಹದಲ್ಲಿ ವರಿಷ್ಠರು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ/ವಿಸ್ತರಣೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗುವ ಸಾಧ್ಯತೆ ಇತ್ತು. ಆದರೆ, ಬಿಹಾರದ ಫಲಿತಾಂಶ ಉಲ್ಟಾ ಆಗಿದ್ದು, ರಾಷ್ಟ್ರೀಯ ಕಾಂಗ್ರೆಸ್‌ಗೆ ಬೂಸ್ಟ್ ಸಿಕ್ಕಿಲ್ಲ. ಬದಲಿಗೆ, “ಎಚ್ಚರ ತಪ್ಪಿದರೆ ಎಲ್ಲವೂ ಊಸ್ಟ್ ಆಗುತ್ತದೆ” ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಅಷ್ಟೇ ಜೋಶ್‌ನಲ್ಲಿ ಕರ್ನಾಟಕದ ಆಂತರಿಕ ರಾಜಕೀಯಕ್ಕೆ ಕೈ ಹಾಕುವ ಸಾಧ್ಯತೆಗಳು ತೀರಾ ವಿರಳವಾಗಿ ಗೋಚರಿಸುತ್ತಿವೆ.

ಬಿಹಾರ ಬೇರೆ, ಕರ್ನಾಟಕ ಬೇರೆ: ಸಿಎಂ ನಿಲುವು

ಬಿಹಾರದ ಫಲಿತಾಂಶವು ಕರ್ನಾಟಕದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಎರಡೂ ರಾಜ್ಯಗಳ ರಾಜಕೀಯ ಲೆಕ್ಕಾಚಾರಗಳು ಸಂಪೂರ್ಣ ವಿಭಿನ್ನವಾಗಿವೆ. ಬಿಹಾರದಲ್ಲಿ ಕಾಂಗ್ರೆಸ್‌ಗೆ ಡಬಲ್ ಡಿಜಿಟ್ ತಲುಪಲೂ ಸಾಧ್ಯವಾಗದಿದ್ದರೂ, ಕರ್ನಾಟಕದ ಕಾಂಗ್ರೆಸ್ ಪರಿಸ್ಥಿತಿ ಅಷ್ಟು ದುರ್ಬಲವಾಗಿಲ್ಲ. ಇಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ತಮ್ಮದೇ ಆದ ವರ್ಚಸ್ಸನ್ನು ಹೊಂದಿರುವ ಪ್ರಬಲ ನಾಯಕರಿದ್ದಾರೆ ಮತ್ತು ಪವರ್ ಸೆಂಟರ್‌ಗಳ ಪ್ರಾಬಲ್ಯವೂ ಅಧಿಕವಾಗಿದೆ.

“ಬಿಹಾರದ ಫಲಿತಾಂಶಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ತಮ್ಮ ಸಂಪುಟ ಪುನರ್‌ರಚನೆಯ ಆಲೋಚನೆಗೆ ಬಿಹಾರದ ಫಲಿತಾಂಶ ಅಡ್ಡಿಯಾಗಬಹುದು ಎಂಬ ಆತಂಕವೂ ಅವರಲ್ಲಿದೆ. ಬಿಹಾರದ ಹೊಡೆತದಿಂದ ನೊಂದಿರುವ ಹೈಕಮಾಂಡ್, ರಾಜ್ಯ ಕಾಂಗ್ರೆಸ್‌ಗೆ ‘ಮದ್ದು ಅರಿಯಲು’ ಇಷ್ಟು ಬೇಗ ಸಿದ್ಧವಾಗುತ್ತದೆಯೇ ಎಂಬ ಅನುಮಾನ ಕಾಡುತ್ತಿದೆ.

‘ಕ್ರಾಂತಿ’ ಚರ್ಚೆಗೆ ಶಾಂತಿ: ವಿಪಕ್ಷದ ವ್ಯಾಖ್ಯಾನ

ಬಿಹಾರ ಫಲಿತಾಂಶದ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ‘ಕ್ರಾಂತಿ’ ಚರ್ಚೆಯ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, “ಹೈಕಮಾಂಡ್ ವೀಕ್ ಆಗಿರುವುದಕ್ಕೆ ಸಿದ್ದರಾಮಯ್ಯ ಸ್ಟ್ರಾಂಗ್ ಆಗುತ್ತಿದ್ದಾರೆ” ಎಂದು ವ್ಯಾಖ್ಯಾನಿಸಿದ್ದಾರೆ. ಇದು ಆಂತರಿಕ ಬದಲಾವಣೆಯ ‘ಕ್ರಾಂತಿ ಕಿಚ್ಚು’ ಸ್ವಲ್ಪ ತಣ್ಣಗಾಗಲು ಕಾರಣವಾಗಿದೆ.

ಕರ್ನಾಟಕ ಬಿಜೆಪಿ ಬಿಹಾರದ ಫಲಿತಾಂಶವನ್ನು ಸಂಭ್ರಮಿಸಿದರೂ, ನವೆಂಬರ್‌ನಲ್ಲಿ ಏನಾದರೂ ರಾಜಕೀಯ ಗೊಂದಲವಾದರೆ ಅದರ ಲಾಭ ಪಡೆದು ಅಧಿಕಾರಕ್ಕೇರಬೇಕೆಂಬ ಅದರ ಆಸೆಗೆ ಕೊಂಚ ನಿರಾಸೆಯಾದಂತಿದೆ. ಬಿಹಾರದ ರಿಸಲ್ಟ್‌ ಕೈ ಹೈಕಮಾಂಡ್‌ಗೆ ದಿಕ್ಕು ತೋಚದಂತೆ ಮಾಡಿದ್ದು, ಈ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಯಾವುದೇ ಹೊಸ ಬದಲಾವಣೆಗೆ ಕೈ ಹಾಕಲು ಅನುಮಾನವಿದೆ.

ಮುಂದಿನ ರಾಜ್ಯಗಳ ಚುನಾವಣೆಗಳ ಮೇಲೆ ಪರಿಣಾಮ

ಬಿಹಾರ ಚುನಾವಣೆ ಫಲಿತಾಂಶವು ಮುಂದಿನ ವರ್ಷ ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಮೇಲೂ ಪರಿಣಾಮ ಬೀರಲಿದೆ. ಎನ್‌ಡಿಎಗೆ ದೊರೆತ ಈ ಗೆಲುವು ಮುಂಬರುವ ಚುನಾವಣಾ ಕದನಗಳಿಗೆ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸಿದೆ.

error: Content is protected !!