Friday, November 14, 2025

Exclusive ವಿಶ್ಲೇಷಣೆ | ಬಿಹಾರ ‘ಪಂಚ ಪಾಂಡವರ’ ಐತಿಹಾಸಿಕ ಗೆಲುವಿನ ಹಿಂದಿದ್ದದ್ದು ಇದೇ ಪಂಚ ಅಂಶಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಐತಿಹಾಸಿಕ ಗೆಲುವು ಸಾಧಿಸಿದೆ. 243 ಸದಸ್ಯಬಲದ ವಿಧಾನಸಭೆಯಲ್ಲಿ ಭರ್ಜರಿ 205 ಸ್ಥಾನಗಳನ್ನು ಗೆಲ್ಲುವ ಮೂಲಕ NDA ಹೊಸ ದಾಖಲೆ ನಿರ್ಮಿಸಿದೆ. ವಿರೋಧ ಪಕ್ಷಗಳ ಸತತ ಟೀಕೆಗಳ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಜನತೆ ಇರಿಸಿರುವ ಅಚಲ ವಿಶ್ವಾಸ ಈ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್, ಆರ್‌ಜೆಡಿ ಮತ್ತು ಕಮ್ಯುನಿಸ್ಟ್ ಒಳಗೊಂಡ ಮಹಾಮೈತ್ರಿಕೂಟಕ್ಕೆ ಹೀನಾಯ ಸೋಲಾಗಿದೆ. ‘ವೋಟ್‌ಚೋರಿ’ ಆರೋಪಗಳನ್ನು ಎಬ್ಬಿಸಿದ್ದ ಕಾಂಗ್ರೆಸ್‌ನ್ನು ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಸ್ಥಿರತೆ, ಅಭಿವೃದ್ಧಿ, ಎಲ್ಲರನ್ನೊಳಗೊಳ್ಳುವ ಆಡಳಿತ, ಮತ್ತು ಪ್ರಧಾನಿ ಮೋದಿ-ಮುಖ್ಯಮಂತ್ರಿ ನಿತೀಶ್ ಕುಮಾರ್ ಜೋಡಿಯ ‘ಡಬಲ್ ಇಂಜಿನ್’ ಸರ್ಕಾರದ ಜನಪರ ಯೋಜನೆಗಳು ಮತದಾರರ ಮೇಲೆ ನಿರ್ಣಾಯಕ ಪರಿಣಾಮ ಬೀರಿವೆ.

ವಿಜಯದ ಹಿಂದಿನ ಪ್ರಮುಖ ಐದು ಅಂಶಗಳು:

1 ಪ್ರಧಾನಿ ಮೋದಿಯವರಲ್ಲಿ ಅಚಲ ವಿಶ್ವಾಸ: ವಿರೋಧಿಗಳ ನಿಂದನಾ ರಾಜಕೀಯದ ನಡುವೆಯೂ ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಭರವಸೆಗಳು ಬಿಹಾರದ ಜನತೆಯಲ್ಲಿ ಬಲವಾಗಿ ಬೇರೂರಿದೆ.

2 ಯುವ ಮತ್ತು ಮಹಿಳಾ ಮತದಾರರ ನಿರ್ಣಾಯಕ ಪಾತ್ರ: ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಮಹಿಳೆಯರು ಮತ್ತು ಯುವಜನತೆ, ಹಿಂದೆ ಆರ್‌ಜೆಡಿ ಆಡಳಿತದಲ್ಲಿ ಅನುಭವಿಸಿದ್ದ ‘ಜಂಗಲ್‌ರಾಜ್’ ಪುನರಾವರ್ತನೆಯಾಗಬಾರದು ಎಂಬ ಗಟ್ಟಿ ತೀರ್ಮಾನದಿಂದ ಎನ್‌ಡಿಎಗೆ ಬೆಂಬಲ ಸೂಚಿಸಿದ್ದಾರೆ.

3 ಸೌಹಾರ್ದಯುತ ಸೀಟು ಹಂಚಿಕೆ: ಬಿಜೆಪಿ, ಜೆಡಿಯು, ಎಲ್‌ಜೆಪಿ (ರಾಮ್ ವಿಲಾಸ್), ಎಚ್‌ಎಎಂ(ಎಸ್), ಆರ್‌ಎಲ್‌ಎಂಗಳು ಗೊಂದಲವಿಲ್ಲದೆ, ವಿಶ್ವಾಸಾರ್ಹವಾಗಿ ಸೀಟು ಹಂಚಿಕೆ ಮಾಡಿಕೊಂಡು ಮೈತ್ರಿಕೂಟದ ಬಲವನ್ನು ಹೆಚ್ಚಿಸಿದವು.

4 ಅಭಿವೃದ್ಧಿ Vs ಗುಂಡಾರಾಜ್ ನೆನಪು: 1990-2005ರ ಆರ್‌ಜೆಡಿಯ ‘ಗೂಂಡಾರಾಜ್’ ಆಡಳಿತದ ಕಹಿ ನೆನಪುಗಳು, ಎನ್‌ಡಿಎಯ ಸ್ಥಿರ, ಅಭಿವೃದ್ಧಿಪರ, ಮತ್ತು ಕಾನೂನು-ಸುವ್ಯವಸ್ಥೆಯ ಆಡಳಿತವನ್ನು ಸ್ವೀಕರಿಸಲು ಮತದಾರರನ್ನು ಪ್ರೇರೇಪಿಸಿತು.

5 ಹೊಸ ಸಮೀಕರಣ: ‘ಇಬಿಸಿ’ ಮತ್ತು ಮುಸ್ಲಿಂ ಮಹಿಳೆಯರ ಬೆಂಬಲ: ಆರ್‌ಜೆಡಿಯ ಸಾಂಪ್ರದಾಯಿಕ ‘ಯಾದವ-ಮುಸ್ಲಿಂ’ ಮತಬ್ಯಾಂಕ್ ಭೇದಿಸಿ, ಆರ್ಥಿಕವಾಗಿ ಹಿಂದುಳಿದ ಗುಂಪುಗಳ ಹೊಸ ಸಮೀಕರಣ ಮೂಡಿಬಂದಿದೆ. ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ಅವರ ಭ್ರಷ್ಟಾಚಾರ ರಹಿತ, ಮಹಿಳಾ ಸಬಲೀಕರಣ ಯೋಜನೆಗಳಿಂದ ಮುಸ್ಲಿಂ ಮಹಿಳೆಯರೂ ಎನ್‌ಡಿಎಗೆ ಬೆಂಬಲ ನೀಡಿದ್ದಾರೆ.

ಮುಸ್ಲಿಂ ಮಹಿಳೆಯರಿಂದಲೂ NDAಗೆ ಅಚಲ ಬೆಂಬಲ!

ಬಿಹಾರದ ಚುನಾವಣಾ ಫಲಿತಾಂಶವು ದೇಶದ ರಾಜಕೀಯದಲ್ಲಿ ಸಕಾರಾತ್ಮಕ ಬದಲಾವಣೆಯ ಹೊಸ ಸಂದೇಶವನ್ನು ನೀಡಿದೆ. ಮುಸ್ಲಿಂ ಬಾಹುಳ್ಯದ ಅನೇಕ ಕ್ಷೇತ್ರಗಳಲ್ಲಿ ಎನ್‌ಡಿಎ, ಅದರಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದು ಗಮನಾರ್ಹ.

ಮಧ್ಯಾಹ್ನ 3:30ರ ಪ್ರವೃತ್ತಿಗಳ ಪ್ರಕಾರ, 36 ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳ ಪೈಕಿ ಎನ್‌ಡಿಎ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಇದರಲ್ಲಿ ಬಿಜೆಪಿ ಒಂದೇ 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆರ್‌ಜೆಡಿ ಕೇವಲ 4 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಕಂಡಿತ್ತು. ಪಾರಂಪರಿಕ ನಿಲುವಿನಿಂದ ಹೊರಬಂದಿರುವ ಮುಸ್ಲಿಂ ಮಹಿಳೆಯರು, ತ್ರಿವಳಿ ತಲಾಖ್ ನಿರ್ಬಂಧ ಮತ್ತು ಇತರ ಸುರಕ್ಷತಾ ಕ್ರಮಗಳಿಂದಾಗಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.

ಉಚಿತಗಳಿಗೆ ಬಲಿಯಾಗದ ಮತದಾರ!

ಆರ್‌ಜೆಡಿ ನಾಯಕ ತೇಜಸ್ವೀ ಯಾದವ್ ದಿನಕ್ಕೊಂದರಂತೆ ಉಚಿತ ಯೋಜನೆಗಳ ಭರವಸೆಯ ಮಹಾಪೂರವನ್ನೇ ಹರಿಸಿದರೂ, ಬಿಹಾರದ ಜನತೆ ಅದಕ್ಕೆ ಬಲಿಯಾಗಲಿಲ್ಲ. ಬದಲಿಗೆ, ಎನ್‌ಡಿಎ ಸರ್ಕಾರದ ಅಭಿವೃದ್ಧಿಪರ ಯೋಜನೆಗಳು ಸಮಾಜದ ಎಲ್ಲ ವರ್ಗಗಳಿಗೂ ತಲುಪಿದ್ದರಿಂದ, ಜನತೆ ಸುಸ್ಥಿರ ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತು ನೀಡಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಹಿಂಸಾಚಾರ ನಡೆಯದಿರುವುದು, ಚುನಾವಣಾ ಅಕ್ರಮಗಳಿಲ್ಲದೆ ಶಾಂತಿಯುತ ಮತದಾನ ನಡೆದಿರುವುದು, ಮತ್ತು ಯಾವುದೇ ಕಡೆ ಮರುಚುನಾವಣೆ ನಡೆಯದಿರುವುದು ಚುನಾವಣಾ ಆಯೋಗ ಮತ್ತು ಪ್ರಧಾನಿ-ಮುಖ್ಯಮಂತ್ರಿ ಜೋಡಿಯ ಆಡಳಿತದ ಸಕಾರಾತ್ಮಕ ಪರಿಣಾಮವನ್ನು ಎತ್ತಿ ತೋರಿಸುತ್ತದೆ. 1.8 ಲಕ್ಷ ‘ಜೀವಿಕಾ ದೀದಿ’ (ಮಹಿಳಾ ಸ್ವಯಂಸೇವಕರು) ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದೂ ಸಹ ಮತದಾನದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗಿದೆ.

error: Content is protected !!