ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಮಟ್ಟದಲ್ಲಿ “ವೃಕ್ಷಮಾತೆ” ಎಂದೇ ಪ್ರಖ್ಯಾತರಾಗಿದ್ದ ಅಪ್ರತಿಮ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರು ಇನ್ನು ನೆನಪು ಮಾತ್ರ. ತಮ್ಮ ಜೀವಿತಾವಧಿಯಿಡೀ ಮರಗಳನ್ನು ಮಕ್ಕಳಂತೆ ಸಾಕಿದ ಈ ಶತಾಯುಷಿಯ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಾಳೆ ಕಲಾ ಗ್ರಾಮದಲ್ಲಿ ಅಂತ್ಯಕ್ರಿಯೆ
ತಿಮ್ಮಕ್ಕ ಅವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಜ್ಞಾನಭಾರತಿ ಬಳಿಯ ಕಲಾ ಗ್ರಾಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಈ ಮೂಲಕ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ಹಿಂದಿನ ವದಂತಿಗಳಿಗೆ ತೆರೆ ಎಳೆಯಲಾಗಿದೆ. ಮೃತರ ಅಂತಿಮ ದರ್ಶನಕ್ಕಾಗಿ ಹುಲಿಕಲ್ ಮತ್ತು ಬೇಲೂರಿನಲ್ಲಿ ವ್ಯವಸ್ಥೆ ಮಾಡಲಾಗಿದೆ.
ರಜೆ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಸರ್ಕಾರ
ಸಾಲುಮರದ ತಿಮ್ಮಕ್ಕ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಎಂಬ ನಕಲಿ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಈ ಕುರಿತು ಸರ್ಕಾರವು ಸ್ಪಷ್ಟನೆ ನೀಡಿದ್ದು, ನಾಳೆ ಯಾವುದೇ ಸರ್ಕಾರಿ ರಜೆ ಇರುವುದಿಲ್ಲ ಎಂದು ಖಚಿತಪಡಿಸಿದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಮಾತ್ರ ಸರ್ಕಾರ ಆದೇಶಿಸಿದೆ.
ಪರಿಸರ ಸಂರಕ್ಷಣೆಯ ಮಹಾನ್ ಹೆಜ್ಜೆ
ಅನಕ್ಷರಸ್ಥೆಯಾಗಿದ್ದರೂ, ಮಕ್ಕಳಿಲ್ಲ ಎಂಬ ಕೊರಗನ್ನು ಮರೆತು, ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಪ್ರೀತಿಯಿಂದ ಬೆಳೆಸಿ ಪೋಷಿಸಿದ ತಿಮ್ಮಕ್ಕ ಅವರ ಪರಿಸರ ಕಾಳಜಿ ಅನನ್ಯವಾದುದು. ಪರಿಸರ ಸಂರಕ್ಷಣೆಯಲ್ಲಿ ಅವರು ಮಾಡಿದ ಮಹತ್ತರ ಕಾರ್ಯಕ್ಕಾಗಿ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

