ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿ ಬಳಿ ನಡೆದಿದ್ದ ಕಾರ್ ಸ್ಫೋಟದ ಘಟನೆ ಮಾಸುವ ಮುನ್ನವೇ, ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಭೀಕರ ಸ್ಫೋಟ ಸಂಭವಿಸಿದೆ. ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ಸಂಭವಿಸಿದ ಪ್ರಚಂಡ ಸ್ಫೋಟದಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ತಡರಾತ್ರಿ 11:22ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಇದರ ಶಬ್ಧಕ್ಕೆ ಸುತ್ತಮುತ್ತಲಿನ ಪ್ರದೇಶದ ಜನರು ದಿಗ್ಭ್ರಮೆಗೊಂಡಿದ್ದಾರೆ. ಸ್ಫೋಟದ ತೀವ್ರತೆಯು ಎಷ್ಟು ಪ್ರಬಲವಾಗಿತ್ತೆಂದರೆ, ಅನೇಕ ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಅಕ್ಕಪಕ್ಕದ ಮನೆಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಭಯಾನಕ ಸಂಗತಿ ಎಂದರೆ, ಮಾನವ ದೇಹದ ಅವಶೇಷಗಳು ಸುಮಾರು 300 ಅಡಿ ದೂರದವರೆಗೆ ಚೆಲ್ಲಾಪಿಲ್ಲಿಯಾಗಿದ್ದವು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟದ ನಂತರ ಉಂಟಾದ ಬೆಂಕಿಯ ಕೆನ್ನಾಲಿಗೆ ಆಕಾಶಕ್ಕೆ ಚಿಮ್ಮಿದ್ದರಿಂದ, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲು ಒಂದು ಗಂಟೆ ತಡವಾಯಿತು. ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಸ್ಫೋಟಕ್ಕೆ ಕಾರಣವೇನು? ಎರಡು ಆಯಾಮಗಳಲ್ಲಿ ತನಿಖೆ
ಪ್ರಕರಣದ ತನಿಖೆಯನ್ನು ಆರಂಭಿಸಿರುವ ತನಿಖಾ ಸಂಸ್ಥೆಗಳು ಮತ್ತು ಸ್ಥಳೀಯ ಪೊಲೀಸ್ ಇಲಾಖೆಯು ಈ ಘಟನೆಯನ್ನು ಎರಡು ಮುಖ್ಯ ಆಯಾಮಗಳಲ್ಲಿ ಪರಿಶೀಲಿಸುತ್ತಿದೆ: ಐಇಡಿ ಪಿತೂರಿ ಅಥವಾ ಅಧಿಕಾರಿಗಳ ನಿರ್ಲಕ್ಷ್ಯ.
ಅಧಿಕಾರಿಗಳ ನಿರ್ಲಕ್ಷ್ಯದ ಶಂಕೆ: ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸೀಲ್ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದಾಗ, ಪೊಲೀಸ್ ಠಾಣೆಯಲ್ಲೇ ಸಂಗ್ರಹಿಸಲಾಗಿದ್ದ ಸುಮಾರು 360 ಕೆ.ಜಿ. ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟಕ ವಸ್ತುಗಳು ಆಕಸ್ಮಿಕವಾಗಿ ಸ್ಫೋಟಗೊಂಡಿರಬಹುದು ಎಂದು ಒಂದು ಮೂಲವು ಶಂಕಿಸಿದೆ.
ಭಯೋತ್ಪಾದಕ ಕೃತ್ಯದ ಶಂಕೆ: ಇನ್ನೊಂದು ಕೋನದಲ್ಲಿ, ಇದನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದೆ. ಪೊಲೀಸ್ ಠಾಣೆ ಆವರಣದಲ್ಲಿ ಜಪ್ತಿ ಮಾಡಿ ನಿಲ್ಲಿಸಿದ್ದ ಕಾರಿನಲ್ಲಿ ಐಇಡಿ ಇರಿಸಲಾಗಿತ್ತು. ಈ ಐಇಡಿಯಲ್ಲಿ ಅಮೋನಿಯಂ ನೈಟ್ರೇಟ್ ಇದ್ದ ಕಾರಣ ಸ್ಫೋಟದ ಪ್ರಮಾಣ ದೊಡ್ಡದಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ದಾಳಿಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್‌ನ ಮುಖವಾಣಿ ಪಿಎಎಫ್‌ಎಫ್ ಗುಂಪು ಹೊತ್ತುಕೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

