ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಕರ್ನಾಟಕದ ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಬಿಹಾರದಲ್ಲಿ ಎನ್‌ಡಿಎಗೆ ಸಿಕ್ಕಿರುವ ಅದ್ಭುತ ಗೆಲುವು, ರಾಜ್ಯದಲ್ಲಿ ಮುಂಬರುವ ಚುನಾವಣೆಗಳನ್ನು ಗೆಲ್ಲಲು ಪಕ್ಷಕ್ಕೆ ಮತ್ತಷ್ಟು ಸ್ಫೂರ್ತಿ ನೀಡಿದೆ ಎಂದು ಹೇಳಿದ್ದಾರೆ.
ನಗರದ ಟನಲ್ ರಸ್ತೆ ಯೋಜನೆ ವಿರೋಧಿಸಿ ಬಿಜೆಪಿ ನಾಯಕರು ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಹಾರದ ಜನರು ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿದ್ದಾರೆ.
ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಖಡಕ್ ತಿರುಗೇಟು:
“ಕಾಂಗ್ರೆಸ್ಸಿಗರು ತಮ್ಮ ಸರ್ಕಾರ ಗೆದ್ದಾಗ ಗೆಲುವು ಎನ್ನುತ್ತಾರೆ, ಸೋತರೆ ಕೂಡಲೇ ‘ವೋಟ್ ಚೋರಿ’ ಎಂದು ಆರೋಪಿಸುತ್ತಾರೆ. ಹಾಗಾದರೆ, ತೆಲಂಗಾಣದಲ್ಲಿ ನಿಮ್ಮ ಪಕ್ಷ ಹೇಗೆ ಗೆದ್ದಿತು? ಸಿದ್ದರಾಮಯ್ಯ ಅವರೇ, ಕರ್ನಾಟಕದಲ್ಲಿ ನಿಮಗೆ 135 ಸೀಟ್‌ಗಳು ಹೇಗೆ ಬಂದವು? ‘ವೋಟ್ ಚೋರಿ’ ಎನ್ನುವುದು ನಿಮ್ಮ ಪಕ್ಷ ಮಾಡುವ ಕೆಲಸವೇ ಹೊರತು ಬೇರೊಬ್ಬರದಲ್ಲ,” ಎಂದು ಅವರು ಗುಡುಗಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ತಂಡದ ವಿರುದ್ಧವೂ ಹರಿಹಾಯ್ದ ಅವರು, “ರಾಹುಲ್ ಗಾಂಧಿ ಮತ್ತು ಅವರ ತಂಡವು ‘ಹಿಟ್ ಅಂಡ್ ರನ್ ಟೀಂ’. ಕೇವಲ ಹಿಟ್ & ರನ್ ಮಾಡುವುದಷ್ಟೇ ಅವರ ಕೆಲಸ,” ಎಂದು ತೀಕ್ಷ್ಣವಾಗಿ ಟೀಕಿಸಿದರು.
ಬೆಂಗಳೂರು ಟನಲ್ ರಸ್ತೆ ಯೋಜನೆಗೆ ತರಾತುರಿ ಬೇಡ:
ಇದೇ ವೇಳೆ, ಬೆಂಗಳೂರು ಟನಲ್ ರಸ್ತೆ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈ ಯೋಜನೆಯಲ್ಲಿ ಯಾವುದೇ ಆತುರ ತೋರಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದರು. “ಈ ಯೋಜನೆಗೆ ಸರಿಯಾದ ಡಿಪಿಆರ್ ಇಲ್ಲ. ಪರಿಸರ ಪರಿಣಾಮ ವರದಿ (EIA) ಆಗಿಲ್ಲ. ತರಾತುರಿಯಲ್ಲಿ ಈ ಯೋಜನೆ ಜಾರಿಗೆ ತರುವುದು ಬೇಡ. ಹೊಸ ಡಿಪಿಆರ್ ತಯಾರಿಸಿ ಮತ್ತು ನಗರದ ಪರಿಸರವನ್ನು ಉಳಿಸಿ,” ಎಂದು ಸಲಹೆ ನೀಡಿದರು.
“ನಾವು ಅಭಿವೃದ್ಧಿಗೆ ವಿರೋಧಿಗಳಲ್ಲ, ಆದರೆ, ಈ ಯೋಜನೆಯಿಂದ ಹಾಳಾಗಬಹುದಾದ ಪಾರ್ಕ್‌ಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಉಳಿಸಿ,” ಎಂದು ಅವರು ಒತ್ತಾಯಿಸಿದರು.

