ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2 ತಾಂಡವಂ’ ಚಿತ್ರ ಬಿಡುಗಡೆಗೆ ಕೌಂಟ್‍ಡೌನ್ ಆರಂಭವಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಸೃಷ್ಟಿಯಾಗಿದೆ. ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರದ ಶೂಟಿಂಗ್ ಅಂತಿಮ ಹಂತಕ್ಕೆ ತಲುಪಿದ್ದು, ಡಿಸೆಂಬರ್ 5ರಂದು ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಪ್ಯಾನ್–ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಮೊದಲ ಹಾಡು ಸಿನಿಮಾ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದೆ. ಮುಂಬೈನಲ್ಲಿ ನಡೆದ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ಬಾಲಯ್ಯ ಹಿಂದಿಯಲ್ಲಿ ಮಾತನಾಡಿ ಅಭಿಮಾನಿಗಳನ್ನು ರಂಜಿಸಿದರು. ‘ಅಖಂಡ ತಾಂಡವಂ’ ಹಾಡು ಬಿಡುಗಡೆ ಸಂದರ್ಭದಲ್ಲಿ ತಮ್ಮದೇ ವಿಭಿನ್ನ ಶೈಲಿಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಚಿತ್ರವನ್ನು ಮಕ್ಕಳಿಗೆ ತಪ್ಪದೇ ತೋರಿಸುವಂತೆ ಪೋಷಕರಿಗೆ ಮನವಿ ಮಾಡಿದರು. ನಮ್ಮ ಹಿಂದು ಸನಾತನ ಧರ್ಮದ ಮೌಲ್ಯಗಳು, ಶಕ್ತಿ ಮತ್ತು ಸಂಸ್ಕೃತಿಯನ್ನು ಈ ಸಿನಿಮಾ ಪರಿಚಯಿಸುತ್ತದೆ ಎಂದು ಹೇಳಿದರು.
ಐವತ್ತು ವರ್ಷಗಳಿಂದ ನಾಯಕನಾಗಿ ಚಿತ್ರರಂಗದಲ್ಲಿ ನಾನು ಸಾಗುತ್ತಿದ್ದೇನೆ. ಬೋಯಪಾಟಿಯವರ ಜೊತೆಗಿನ ನನ್ನ ನಾಲ್ಕನೇ ಸಿನಿಮಾ ಇದು; ನಮ್ಮ ಕಾಂಬಿನೇಷನ್ ಈ ಬಾರಿ ಮತ್ತಷ್ಟು ಶಕ್ತಿಯುತವಾಗಿ ಮೂಡಿಬಂದಿದೆ ಎಂದು ಬಾಲಯ್ಯ ಹೇಳಿದರು. ಚಿತ್ರದಲ್ಲಿ ಕೈಲಾಶ್ ಖೇರ್ ಮತ್ತು ಶಂಕರ್ ಮಹದೇವನ್ ಹಾಡಿರುವ ಗೀತೆಗೆ ವಿಶೇಷ ಮೆಚ್ಚುಗೆ ದೊರಕಿದೆ. ಹರ್ಷಾಲಿ ಮಾಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಬಾಲಯ್ಯ ಮಗಳು ತೇಜಸ್ವಿನಿ ಚಿತ್ರದ ಪ್ರಸ್ತುತಪಡಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಬೋಯಪಾಟಿ ಶ್ರೀನು, ‘ಇದು ಕೇವಲ ಸಿನಿಮಾ ಅಲ್ಲ, ಭಾರತದ ಆತ್ಮ. ಇಡೀ ಕುಟುಂಬ ಒಟ್ಟಿಗೆ ನೋಡುವ ಸಿನಿಮಾ. ನಮ್ಮ ದೇಶ, ನಮ್ಮ ವೇದ, ನಮ್ಮ ಸಂಸ್ಕೃತಿಯನ್ನು ಈ ಚಿತ್ರದಲ್ಲಿ ನೋಡಬಹುದು.’ ಎಂದು ಹೇಳಿದರು. ಡಿಸೆಂಬರ್ 5ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಚಿತ್ರಮಂದಿರಗಳಲ್ಲಿ ಭರ್ಜರಿ ಸ್ಪಂದನೆ ನಿರೀಕ್ಷಿಸಲಾಗಿದೆ.

