ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಆಟೋ ರಿಕ್ಷಾ ಪ್ರಯಾಣಿಕರಿಗೆ ಮುಂದಿನ ವರ್ಷದಿಂದ ಹೆಚ್ಚುವರಿ ವೆಚ್ಚ ಅನಿವಾರ್ಯವಾಗಲಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಜನವರಿ 1ರಿಂದ ಹೊಸ ದರ ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದು, ಇದರಿಂದ ಕನಿಷ್ಠ ಆಟೋ ಪ್ರಯಾಣದ ಶುಲ್ಕ 30 ರೂಪಾಯಿಯಿಂದ 36 ರೂಪಾಯಿಗೆ ಏರಲಿದೆ. ಅದೇ ರೀತಿ ಈಗ ಪ್ರತಿ ಕಿ.ಮೀಗೆ 15 ರೂ ಇದ್ದ ದರವು 18 ರೂಪಾಯಿಗೆ ಹೆಚ್ಚಳವಾಗಲಿದೆ.
ನಾಲ್ಕು ವರ್ಷಗಳ ಬಳಿಕ ಆಟೋ ದರ ಪರಿಷ್ಕರಣೆ ಹಲವಾರು ಕಾರಣಗಳಿಂದ ಅಗತ್ಯವಾಗಿದೆ ಎಂದು ಚಾಲಕರು ಮತ್ತು ಮಾಲೀಕರು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಈ ತೀರ್ಮಾನ ಜಾರಿಯಾಗಿದೆ.
ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದರ ಪರಿಷ್ಕರಣೆಗೆ ಅಂತಿಮ ಒಪ್ಪಿಗೆ ದೊರೆತಿದೆ. ಇಂಧನ ದರ, ವಾಹನ ನಿರ್ವಹಣಾ ವೆಚ್ಚ ಹಾಗೂ ಆಟೋ ಭಾಗಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಚಾಲಕರು ದರ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದರು. ಬೆಂಗಳೂರು ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮೈಸೂರಿನಲ್ಲೂ ತಕ್ಕಮಟ್ಟಿನ ಏರಿಕೆ ಅನಿವಾರ್ಯವೆಂದು ಶಾಸಕಾಂಗ ತೀರ್ಮಾನಿಸಿದೆ.

