ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನ ಪರ್ವತಗಳ ನಡುವೆ ಹರಿಯುವ ಜಲಪಾತಗಳು ಪ್ರವಾಸಿಗರಿಗೆ ಆಕರ್ಷಣೆಯಾದರೂ, ಕೆಲವೊಮ್ಮೆ ಅವೇ ಸ್ಥಳಗಳು ಅನಾಹುತಗಳ ವೇದಿಕೆಯಾಗುತ್ತವೆ. ಮಲ್ಲೇನಹಳ್ಳಿ ಸಮೀಪದ ಕಾಮೇನಹಳ್ಳಿ ಜಲಪಾತದಲ್ಲಿ ಸಂಭವಿಸಿದ ದುರ್ಘಟನೆ ಇದಕ್ಕೆ ತಾಜಾ ಉದಾಹರಣೆ. ಸ್ನೇಹಿತರ ಜೊತೆ ಪ್ರಕೃತಿಯ ಸೌಂದರ್ಯವನ್ನು ಸೆರೆಹಿಡಿಯಲು ಬಂದಿದ್ದ 19 ವರ್ಷದ ವರುಣ್ ದೇಸಾಯಿ, ಸೆಲ್ಫಿ ಕ್ಲಿಕ್ಕಿಸುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಬೆಳಗಾವಿ ಮೂಲದ ವರುಣ್, ಚಿಕ್ಕಮಗಳೂರು ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಇ ವಿದ್ಯಾರ್ಥಿ. ಐವರು ಸ್ನೇಹಿತರ ಜೊತೆ ಮೂರು ಬೈಕಿನಲ್ಲಿ ಜಲಪಾತಕ್ಕೆ ಭೇಟಿ ನೀಡಿದಾಗ, ಪ್ರದೇಶದ ಅಪಾಯದ ಬಗ್ಗೆ ಅರಿವಿರದೆ ಜಲಪಾತದ ಅಂಚಿನತ್ತ ಹೋದಾಗ ಅವಘಡ ಸಂಭವಿಸಿದೆ. ರಾತ್ರಿವರೆಗೂ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ನಡೆಸಿದ ಶೋಧಕಾರ್ಯ ಫಲ ನೀಡಿಲ್ಲ, ಆದರೆ ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ಘಟನೆ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮತ್ತು ಸ್ಥಳೀಯರು ಬೇರೆ ಊರಿನಿಂದ ಬರುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಅಪರಿಚಿತ ಪ್ರದೇಶಗಳಲ್ಲಿ ಹೆಚ್ಚುವರಿ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.

