January15, 2026
Thursday, January 15, 2026
spot_img

ಕಾಲ್ ಸೆಂಟರ್ ಹೆಸರಿನಲ್ಲಿ ‘ದೊಡ್ಡಣ್ಣನ’ ಜನರನ್ನೇ ವಂಚಿಸಿದ ಖತರ್ನಾಕ್ ಗ್ಯಾಂಗ್‌ ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ, ಅದಕ್ಕಿಂತ ಎರಡು ಹೆಜ್ಜೆ ಮುಂದೇ ವಂಚಕರು ತಮ್ಮ ಮೋಸದ ಜಾಲವನ್ನು ವಿಸ್ತರಿಸುತ್ತಿದ್ದಾರೆ. ಇದಕ್ಕೆ ಹೊಸ ಸಾಕ್ಷಿ ಬೆಳಗಾವಿಯಲ್ಲಿ ಬಯಲಾಗಿರುವ ಭಾರೀ ಸೈಬರ್‌ ವಂಚನೆ ಜಾಲ. ಸಾಮಾನ್ಯವಾಗಿ ಸೈಬರ್ ಮೋಸಗಳಿಗೆ ವಿದೇಶಿ ಲಿಂಕ್‌ಗಳೇ ಕಾರಣ ಎನ್ನುವ ಅಭಿಪ್ರಾಯ ಇದ್ದರೂ, ಈ ಬಾರಿ ವಂಚನೆಗೊಳಗಾದವರು ವಿದೇಶಿಗರೇ.

ಬೆಳಗಾವಿ ಪೊಲೀಸರು ಮೂರು ದಿನಗಳ ತಪಾಸಣೆ ನಡೆಸಿ, ಅಜಮ್ ನಗರದಲ್ಲಿರುವ ಕುಮಾರ್ ಹಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃತಕ ಕಾಲ್ ಸೆಂಟರ್‌ ಮೇಲೆ ದಾಳಿ ಮಾಡಿ ಒಟ್ಟಾರೇ 33 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಎಲ್ಲರೂ ಉತ್ತರ ಭಾರತ ಮೂಲದವರಾಗಿದ್ದು, ಅಲ್ಲಿಂದಲೇ ಅಂತಾರಾಷ್ಟ್ರೀಯ ಮಟ್ಟದ ದಂಧೆ ನಡೆಸುತ್ತಿದ್ದರು. ಸ್ಥಳದಿಂದ 37 ಲ್ಯಾಪ್‌ಟಾಪ್‌ಗಳು ಮತ್ತು 37 ಮೊಬೈಲ್‌ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಗ್ಯಾಂಗ್‌ ಅಮೆರಿಕದ ಹಿರಿಯ ನಾಗರಿಕರನ್ನು ಟಾರ್ಗೆಟ್ ಮಾಡಿ ಡಾರ್ಕ್ ವೆಬ್‌ನಿಂದ ಸಂಖ್ಯೆಗಳು ಪಡೆದು ಕರೆ ಮಾಡುತ್ತಿತ್ತು. “ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಬಂದಿದೆ” ಎಂಬ ನಾಟಕದೊಂದಿಗೆ ಮೋಸ ಪ್ರಾರಂಭವಾಗುತ್ತಿದ್ದರೆ, ನಂತರ ‘ಫೆಡರಲ್ ಟ್ರೇಡ್ ಕಮಿಷನ್’ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಬಲೆಗೆ ಬೀಳಿಸಿದ್ದವರಿಂದ ಹಣ ಎಗರಿಸುತ್ತಿದ್ದರು. ಪ್ರತಿಯೊಬ್ಬರಿಗೂ ಪ್ರತ್ಯೇಕ ಕಥೆ ರಚಿಸಿ ಲಕ್ಷಾಂತರ ಎಗರಿಸುತ್ತಿದ್ದ ಈ ಜಾಲ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸೈಬರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Most Read

error: Content is protected !!