ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಭೇರಿ ಬಾರಿಸಿರುವ ಬಿಜೆಪಿ ತನ್ನ ಪಕ್ಷದಿಂದ ಮೂವರನ್ನು ಅಮಾನತು ಮಾಡಿದೆ.
ಬಿಹಾರದಲ್ಲಿ ಬಹುದೊಡ್ಡ ಗೆಲುವಿನ ಮರುದಿನವೇ ಅರಾಹ್‌ನ ಬಿಜೆಪಿ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್ , ಎಂಎಲ್‌ಸಿ ಅಶೋಕ್ ಅಗರ್ವಾಲ್ ಮತ್ತು ಕಟಿಹಾರ್ ಮೇಯರ್ ಉಷಾ ಅಗರ್ವಾಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಈ ಮೂವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಮಾನತುಗೊಳಿಸಿರುವುದಾಗಿ ಅದು ಹೇಳಿದೆ.
ಬಿಹಾರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಘಟಕವು ಶನಿವಾರ ,ಇವರನ್ನು ಪಕ್ಷದೊಳಗೆ ಶಿಸ್ತು ಕಾಯ್ದುಕೊಳ್ಳಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಪಕ್ಷ ಈ ನಿರ್ಣಯವನ್ನು ಕೈಗೊಂಡಿರುವುದಾಗಿ ತಿಳಿಸಿದೆ. ಅವರು ನಿರಂತರ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಈ ಕ್ರಮ ಅಗತ್ಯವಾಗಿತ್ತು. ವಾರದೊಳಗೆ ಈ ಮೂವರು ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಬಿಜೆಪಿ ಕಳುಹಿಸಿರುವ ಅಧಿಕೃತ ಪತ್ರದಲ್ಲಿ ತಿಳಿಸಿದೆ.
ಆರ್.ಕೆ. ಸಿಂಗ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದ್ದು, ಅವರು ಪದೇ ಪದೇ ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಪಕ್ಷವು ಬಿಹಾರದಲ್ಲಿ ನಡೆಸಲಾಗುತ್ತಿರುವ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಂಡಿದೆ.
ಆರ್.ಕೆ. ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ನೀವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದೀರಿ. ಇದು ಪಕ್ಷಕ್ಕೆ ಹಾನಿಯನ್ನುಂಟು ಮಾಡಿದೆ. ಆದ್ದರಿಂದ, ನಿಮ್ಮನ್ನು ಅಮಾನತುಗೊಳಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ಪತ್ರ ನೀಡಿದ ಕೆಲವೇ ಗಂಟೆಗಳಲ್ಲಿ ಪಕ್ಷವು ಅವರನ್ನು ತನ್ನ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕುವುದಾಗಿ ತಿಳಿಸಿದೆ.
ಅಶೋಕ್ ಕುಮಾರ್ ಅಗರ್ವಾಲ್ ಅವರು ಬಿಜೆಪಿ ಅಭ್ಯರ್ಥಿ ತಾರ್ ಕಿಶೋರ್ ಪ್ರಸಾದ್ ವಿರುದ್ಧ ವಿಐಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರ ಮಗ ಸೌರವ್ ಅಗರ್ವಾಲ್ ಪರವಾಗಿ ಪ್ರಚಾರ ನಡೆಸಿದ್ದು, ಇದು ಪಕ್ಷ ವಿರೋಧಿ ಕಾರ್ಯವಾಗಿದೆ ಎಂದು ಹೇಳಿದೆ.

