Sunday, November 16, 2025

ಶ್ರೀನಗರ ಪೊಲೀಸ್‌ ಠಾಣೆಯಲ್ಲಿ ಸ್ಫೋಟ: ಆಕಸ್ಮಿಕ ಘಟನೆ ಎಂದ ಕೇಂದ್ರ ಗೃಹ ಸಚಿವಾಲಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀನಗರ ನೌಗಮ್‌ ಪೊಲೀಸ್‌ ಠಾಣೆಯಲ್ಲಿ ಸಂಭವಿಸಿದ್ದ ಸ್ಫೋಟ ಆಕಸ್ಮಿಕ ಘಟನೆ. ಸಂಗ್ರಹಿಸಿದ್ದ ಸ್ಫೋಟಕದಿಂದ ಮಾದರಿಯನ್ನ ಹೊರ ತೆಗೆಯುವಾಗ ಸ್ಫೋಟ ಸಂಭವಿಸಿದೆ. ಇದರ ಹಿಂದೆ ಯಾವುದೇ ಭಯೋತ್ಪಾದನೆ ಪಿತೂರಿ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ನಳಿನ್ ಪ್ರಭಾತ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಜಿಪಿ ನಳಿನ್ ಪ್ರಭಾತ್, ಪೊಲೀಸ್ ಠಾಣೆಯಲ್ಲಿ ನಡೆದ ಸ್ಫೋಟವು ಯಾವುದೇ ಭಯೋತ್ಪಾದಕರ ಸಂಚು ಅಥವಾ ದಾಳಿಯಲ್ಲ. ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡವು ಮಾದರಿಗಳನ್ನು ಸಂಗ್ರಹಿಸುತ್ತಿದ್ದಾಗ ಸಂಭವಿಸಿದ ಅಪಘಾತ. ಘಟನೆಯಲ್ಲಿ 6 ಪೊಲೀಸರು ಸೇರಿ 9 ಮಂದಿ ಮೃತಪಟ್ಟಿದ್ದಾರೆ, 27 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಫರಿದಾಬಾದ್‌ನಿಂದ ವಶಪಡಿಸಿಕೊಂಡ ಸ್ಫೋಟಕಗಳ ಮಾದರಿ ಪರೀಕ್ಷೆಯು ಕಳೆದ 2 ದಿನಗಳಿಂದ ನಡೆಯುತ್ತಿದೆ. ಇದರ ಭಾಗವಾಗಿಯೇ ರಾತ್ರಿ 11:20ರ ಸುಮಾರಿಗೆ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸುವಾಗ ಘಟನೆ ಸಂಭವಿಸಿದೆ. ಇದು ದುರಾದೃಷ್ಟಕರ, ಒಟ್ಟಿನಲ್ಲಿ ಘಟನೆ ಸಂಬಂಧಿಸಿದಂತೆ ಪೂರ್ಣ ತನಿಖೆ ನಡೆಯುತ್ತಿದೆ. ಇನ್ನೂ ಘಟನಾ ಸ್ಥಳದಿಂದ 6 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅವು ಗುರುತಿಸಲಾಗದ ಸ್ಥಿತಿಯಲ್ಲಿದೆ. ಮೃತದೇಹಗಳನ್ನು ಶ್ರೀನಗರದಲ್ಲಿರುವ ಪೊಲೀಸ್ ಕಂಟ್ರಲ್ ರೂಮ್‌ಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ನೌಗಮ್ ಠಾಣೆಯಲ್ಲಿ ಉಂಟಾದ ಸ್ಫೋಟದ ಕುರಿತು ಗೃಹ ಸಚಿವಾಲಯ ಕೂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಆಕಸ್ಮಿಕ ಘಟನೆ ಎಂದು ಹೇಳಿದೆ.

ನವೆಂಬರ್‌ 14ರ ರಾತ್ರಿ 11:20ಕ್ಕೆ ಜಮ್ಮು ಮತ್ತು ಕಾಶ್ಮೀರದ ನೌಗಮ್‌ ಪೊಲೀಸ್‌ ಠಾಣೆಯೊಳಗೆ ಆಕಸ್ಮಿಕ ಘಟನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಇತ್ತೀಚೆಗೆ ಭಯೋತ್ಪಾದಕ ಮಾಡ್ಯೂಲ್‌ ಭೇದಿಸಿದ್ದ ಪೊಲೀಸರು ಫರಿದಾಬಾದ್‌ನಲ್ಲಿ ಕಾರ್ಯಾಚರಣೆ ವೇಳೆ ಬೃಹತ್‌ ಪ್ರಮಾಣದ ಸ್ಫೋಟಕಗಳನ್ನ ವಶಪಡಿಸಿಕೊಂಡಿದ್ದರು. ಇದನ್ನ ಪೊಲೀಸ್ ಠಾಣೆಯ ತೆರೆದ ಪ್ರದೇಶದಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಅಲ್ಲದೇ ವಶಪಡಿಸಿಕೊಳ್ಳಲಾದ ರಾಸಾಯನಿಕ ಮತ್ತು ಸ್ಫೋಟಕಗಳ ಮಾದರಿಯನ್ನ ವಿಧಿವಿಜ್ಞಾನ ಮತ್ತು ರಾಸಾಯನಿಕ ಪರೀಕ್ಷೆ ಕಳಿಸಲಾಗುತ್ತಿತ್ತು. ಈ ಪ್ರಕ್ರಿಯೆ ಕಳೆದ 2 ದಿನಗಳಿಂದ ನಡೆಯುತ್ತಿತ್ತು. ತಜ್ಞರು ಎಚ್ಚರಿಕೆಯಿಂದಲೇ ನಿರ್ವಹಿಸುತ್ತಿದ್ದರು. ಆದಾಗ್ಯೂ ಪ್ರಕ್ರಿಯೆ ಸಮಯದಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿದೆ. ಇದು ನಿಜಕ್ಕೂ ದುರಾದೃಷ್ಟಕರ. ಘಟನೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಕಂದಾಯ ಅಧಿಕಾರಿಗಳು ಹಾಗೂ ಮೂವರು ನಾಗರಿಕರೂ ಇದ್ದಾರೆ. ಗಾಯಾಳುಗಳನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣೆಯ ಸುತ್ತಲಿನ ಕಟ್ಟಡಗಳಿಗೂ ಹಾನಿಯಾಗಿದೆ. ಅಪಘಾತ ಪ್ರಕರಣವನ್ನ ತನಿಖೆ ಮಾಡಲಾಗುತ್ತಿದೆ. ಇದರ ಹೊರತಾಗಿ ಯಾವುದೇ ಊಹಾಪೋಹಗಳು ಅನಗತ್ಯ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

error: Content is protected !!