ಹೊಸದಿಗಂತ ವರದಿ, ಕಲಬುರಗಿ:
ಹೈಕೋರ್ಟ್ ಸೂಚನೆಯಂತೆ (ನ.೧೬ರಂದು) ನಾಳೆ ಮಧ್ಯಾಹ್ನ ೩ ಗಂಟೆಯಿಂದ ಸಂಜೆ ೫-೩೦ರವರೆಗೆ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಕಾರ್ಯಕ್ರಮ ನಡೆಯಲಿದ್ದು,ಈ ನಿಮಿತ್ತ ಈಗಾಗಲೇ ಪೋಲಿಸ್ ಇಲಾಖೆಯಿಂದ ಬಿಗಿ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ನಾಳೆ ಮಧ್ಯಾಹ್ನ ೩ ಗಂಟೆಗೆ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಪಥಸಂಚಲನ ಆರಂಭವಾಗಲಿದ್ದು, ಹೈಕೋರ್ಟ್ ಸೂಚನೆಯಂತೆ ನಿಗದಿತ ಸ್ಥಳದಲ್ಲಿ,ನಿಗದಿತ ಕಾರ್ಯಕ್ರಮ ನಡೆಸುವಂತೆ ಸಂಘಟಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಥಸಂಚಲನಕ್ಕೆ ಪೋಲಿಸ್ ಇಲಾಖೆಯಿಂದ ಈಗಾಗಲೇ ಅಧಿಕಾರಿಗಳು,ಸಿವಿಲ್ ಸೇರಿ ೬೫೦, ೨೫೦ ಹೋಂ ಗಾರ್ಡ್, ಕೆ.ಎಸ್.ಆರ್.ಪಿ, ಡಿಎಆರ್ ತುಕಡಿ ಪಡೆ ಪಟ್ಟಣದಲ್ಲಿ ನಿಯೋಜನೆ ಮಾಡಲಾಗಿದೆ. ೫೦ರಿಂದ ೬೦ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.೫ ಡ್ರೋಣ್ ಕ್ಯಾಮೇರಾ ಬಳಸಲಾಗುತ್ತಿದೆ ಎಂದರು.
ಸಂಘಟಕರು ನಿಗದಿತ ಸಮಯಕ್ಕೆ ಹಾಗೂ ನಿಗದಿತ ಸ್ಥಳದಲ್ಲಿ ಕಾರ್ಯಕ್ರಮ ನಡೆಸಬೇಕು.ಬ್ಯಾಂಡ್ ಸೇರಿದಂತೆ ೩೫೦ ಜನ ಮಾತ್ರ ಪಥಸಂಚಲನದಲ್ಲಿ ಭಾಗವಹಿಸಬೇಕು.ಚಿತ್ತಾಪುರ ಟೌನ್ ಹಾಲ್ ಬಿಟ್ಟು ಹೊರಗಿನವರು ಯಾರೇ ಆಗಿರಲಿ ಭಾಗಿಯಾಗುವಂತಿಲ್ಲ ಎಂದು ಹೊಸ ದಿಗಂತಕ್ಕೆ ತಿಳಿಸಿದರು.

