Monday, November 17, 2025

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ: ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಶ್ನೆ ಕೇಳಲು ಹಣ ಕೇಳಿದ ಆರೋಪದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ ಎದುರಾಗಿದೆ. ನಾಲ್ಕು ವಾರಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಲೋಕಪಾಲವು ಸಿಬಿಐಗೆ ಅನುಮತಿ ನೀಡಿದೆ.

ನವೆಂಬರ್ 12 ರಂದು ಸಭೆ ನಡೆಸಿದ ಲೋಕಪಾಲದ ಪೂರ್ಣ ಪೀಠ, ಸಂಬಂಧಿತ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡುವ ನಿರ್ಧಾರ ತೆಗೆದುಕೊಂಡಿತು. ಆರೋಪಪಟ್ಟಿಯ ಪ್ರತಿಯನ್ನು ತನಗೆ ಸಲ್ಲಿಸುವಂತೆ ಕೇಂದ್ರಿಯ ತನಿಖಾ ತಂಡಕ್ಕೆ ಲೋಕಪಾಲ್ ಸೂಚಿಸಿದೆ.

ಮಹುವಾ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಹಣ ಮತ್ತು ಗಿಫ್ಟ್ ಪಡೆದು ಸದನದಲ್ಲಿ ಪ್ರಶ್ನೆ ಕೇಳುವ ಮೂಲಕ ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಹುವಾ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.

ಮಹುವಾ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ. ಇದರಲ್ಲಿ ಸಂಸತ್ತಿನ ಸದಸ್ಯತ್ವವನ್ನು ದುರ್ಬಳಕೆ ಮಾಡಿಕೊಂಡು, ರಾಷ್ಟ್ರೀಯ ಭದ್ರತೆಗೆ ಬೆದರಿಕೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದರು. ಅವರ ವಿರುದ್ಧದ ಆರೋಪಿಗಳ ಕುರಿತು ಪ್ರಾಥಮಿಕ ತನಿಖೆ ವಿವರ ಪಡೆದ ನಂತರ ಲೋಕಪಾಲ್, ಸಿಬಿಐ ತನಿಖೆಗೆ ನಿರ್ದೇಶನ ನೀಡಿತ್ತು. ಸಿಬಿಐ ಮಾರ್ಚ್ 21, 2024 ರಂದು ಮಹುವಾ ಮತ್ತು ಹಿರಾನಂದಾನಿ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

error: Content is protected !!