ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ‘ಮಹಾಘಟಬಂಧನ್ ‘ ಮೈತ್ರಿಕೂಟದ ರಾಷ್ಟ್ರೀಯ ಜನತಾ ದಳ( RJD) ಶನಿವಾರ ತನ್ನ ಮೊದಲ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕ ಜೀವನದಲ್ಲಿ ಏರಿಳಿತ ಅನಿವಾರ್ಯ ಎಂದು ಹೇಳಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್ ಜೆಡಿ, ತನ್ನನ್ನುಬಡವರ ಪಕ್ಷ ಎಂದು ಕರೆದುಕೊಂಡಿದೆ. ತೇಜಸ್ವಿ ಯಾದವ್ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿದ ಪಕ್ಷ, ಸೋಲಿಗೆ ಯಾವುದೇ ದುಃಖವಿಲ್ಲ ಎಂದು ಹೇಳಿದೆ.
ಸಾರ್ವಜನಿಕ ಸೇವೆ ಒಂದು ನಿರಂತರ ಪ್ರಕ್ರಿಯೆ, ಅಂತ್ಯವಿಲ್ಲದ ಪ್ರಯಾಣ ಅದರಲ್ಲಿ ಏರಿಳಿತಗಳು ಅನಿವಾರ್ಯ. ಸೋಲಿಗೆ ದುಃಖವಿಲ್ಲ, ಗೆಲುವಿನಲ್ಲಿ ದುರಹಂಕಾರವಿಲ್ಲ ರಾಷ್ಟ್ರೀಯ ಜನತಾದಳ ಬಡವರ ಪಕ್ಷ, ಅದು ಬಡವರ ನಡುವೆ ಧ್ವನಿ ಎತ್ತುತ್ತಲೇ ಇರುತ್ತದೆ ಎಂದು ಹೇಳಿಕೊಂಡಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ತನ್ನ ಇತಿಹಾಸದಲ್ಲಿ ಎರಡನೇ ಬಾರಿಗೆ ಅತ್ಯಂತ ಕಡಿಮೆ 25 ಸ್ಥಾನಗಳಿಗೆ ಕುಸಿದಿದ್ದು, ಜೆಡಿಯುನ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವಿಗೆ ದಾರಿ ಮಾಡಿಕೊಟ್ಟಿದೆ.

