Sunday, November 16, 2025

ತನ್ನದೇ ತಪ್ಪು ನಿರ್ಧಾರಗಳಿಂದ ಸರ್ವನಾಶದ ಹಾದಿಯತ್ತ ಕಾಂಗ್ರೆಸ್: ಸೂರತ್‌ನಲ್ಲಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಕಸಿತ ಭಾರತದ ಪರವಾಗಿ ದೇಶದ ಜನ ಒಂದುಗೂಡಿದ್ದಾರೆ . ಬಿಹಾರ ವಿಧಾನಸಭೆ ಚನಾವಣೆ ಫಲಿತಾಂಶ 2025ನ್ನು ದೇಶದ ರಾಜಕಾರಣದ ದಿಕ್ಸೂಚಿ ಎಂದು ಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದರು. ಶತಮಾನಗಳಷ್ಟು ಹಳೆಯ ಪಕ್ಷ ತನ್ನದೇ ಆದ ತಪ್ಪು ನಿರ್ಧಾರಗಳಿಂದ ಸರ್ವನಾಶದ ಹಾದಿ ಹಿಡಿಯಲಿದೆ ಎಂದು ಕಿಡಿಕಾರಿದರು.

ಈ ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್ ಪಕ್ಷ (ಎಂಎಂಸಿ)ವನ್ನು ದೇಶ ತಿರಸ್ಕರಿಸಿದೆ. ರಾಷ್ಟ್ರೀಯತಾವಾದಿ ಆದರ್ಶಗಳಲ್ಲಿ ಆಳವಾಗಿ ಬೇರೂರಿರುವವರು ಮತ್ತು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯಂತಹ ವ್ಯಕ್ತಿಗಳ ನೇತೃತ್ವದಲ್ಲಿ ಸೇವೆ ಸಲ್ಲಿಸಿದವರು ಸೇರಿದಂತೆ, ಕಾಂಗ್ರೆಸ್ ಪಕ್ಷದ ಒಂದು ದೊಡ್ಡ ಭಾಗವು ಈ ‘ನಾಮದಾರ’ ಕ್ರಮಗಳಿಂದ ಬೇಸತ್ತಿದೆ’ ಎಂದು ಪ್ರಧಾನಿ ಮೋರಿ ಹರಿಹಾಯ್ದರು.

ಸತತ ಚುನಾವಣಾ ಸೋಲಿಗೆ ಸ್ಪಷ್ಟ ಕಾರಣಗಳನ್ನು ನೀಡಲು ಕಾಂಗ್ರೆಸ್‌ ಪಕ್ಷದ ಉನ್ನತ ನಾಯಕತ್ವಕ್ಕೆ ಸಾಧ್ಯವಾಗುತ್ತಿಲ್ಲ. ಅದು ತನ್ನ ಕಾರ್ಯಕರ್ತರನ್ನೇ ದಾರಿ ತಪ್ಪಿಸುತ್ತಿದ್ದು, ಪ್ರತಿಬಾರಿಯೂ ಇವಿಎಂ, ಚುನಾವಣಾ ಆಯೋಗದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಕಾಲಕಳೆಯುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಿದ್ದ ಕಾಂಗ್ರೆಸ್‌ ಪಕ್ಷವನ್ನು ಬಿಹಾರದ ಮತದಾರ ತಿರಸ್ಕರಿಸಿದ್ದಾನೆ. ನುಸುಳುಕೋರರನ್ನು ಬೆಂಬಲಿಸುವ ಆ ಪಕ್ಷದ ದುಷ್ಟ ನೀತಿಯನ್ನು ದೇಶದ ಜನ ಮನಗಂಡಿದ್ದಾರೆ. ಎನ್‌ಡಿಎ ಆಡಳಿತದಲ್ಲಿ ಬಿಹಾರದಲ್ಲಿ ನುಸುಳುಕೋರತನವನ್ನು ತಡೆಗಟ್ಟಲಾಗುವುದು ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

ಬಿಹಾರದ ಜನ ಜಾತಿ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಇದು ದೇಶದ ರಾಜಕಾರಣದಲ್ಲಿ ಉತ್ತಮ ಬೆಳವಣಿಗೆ. ಜಾತಿ ರಾಜಕಾರಣದ ವಿಷ ಬಿಹಾರವನ್ನು ದಶಕಗಳಿಂದ ನಿಸ್ತೇಜವನ್ನಾಗಿ ಮಾಡಿತ್ತು. ಆದರೆ ಈಗ ಜಾತಿ ರಾಜಕಾರಣವನ್ನು ಮೀರಿ ಬಿಹಾರವು ಅನ್ಯ ರಾಜ್ಯಗಳಿಗೆ ಮಾದರಿಯಾಗಿ ರೂಪುಗೊಂಡಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

error: Content is protected !!