Sunday, November 16, 2025

WEATHER | ರಾಜ್ಯದಲ್ಲಿ ಮತ್ತೊಮ್ಮೆ ಹವಾಮಾನ ಬದಲಾವಣೆ: ಇಂದಿನಿಂದ ಮತ್ತೆ ಮಳೆ ಶುರುವಾಗುತ್ತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹವಾಮಾನ ಇಲಾಖೆ ನೀಡಿರುವ ಹೊಸ ಮುನ್ಸೂಚನೆಯ ಪ್ರಕಾರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಮತ್ತೆ ಶುರುವಾಗುವ ಸಾಧ್ಯತೆ ಇದೆ. ಈ ಮಳೆಯ ಅಬ್ಬರ ನವೆಂಬರ್ 22ರವರೆಗೆ ಮುಂದುವರಿಯಬಹುದೆಂದು ಇಲಾಖೆಯ ಅಂದಾಜು.

ಹಾಸನ, ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಧ್ಯಮದಿಂದ ಸಾಧಾರಣ ಮಟ್ಟದ ಮಳೆಯಾಗುವ ಸೂಚನೆ ನೀಡಲಾಗಿದೆ. ವಿಶೇಷವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿ ಕಡೆ ಮತ್ತೆ ಮಳೆ ಚಟುವಟಿಕೆ ತೀವ್ರವಾಗುವ ಸಾಧ್ಯತೆ ಇದೆ. ಇಂದು ಅಥವಾ ನಾಳೆ ಮಳೆಯ ತೀವ್ರತೆ ಹೆಚ್ಚಾಗುವ ಅವಕಾಶವಿರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಇದಕ್ಕೆ ಜೊತೆಗೂಡಿ ಶೀತ ಗಾಳಿಯೂ ರಾಜ್ಯದ ಕೆಲವು ಭಾಗಗಳಲ್ಲಿ ಈಗಾಗಲೇ ಹೆಚ್ಚಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆಗೆ ಚಳಿ ಇನ್ನಷ್ಟು ತೀವ್ರವಾಗಿ ಅನುಭವವಾಗುತ್ತಿದ್ದು, ಮುಂಚಿತವಾಗಿಯೇ ಥಂಡಿಯ ಪರಿಣಾಮ ಜನಜೀವನಕ್ಕೆ ಅಡಚಣೆಯಾಗುತ್ತಿದೆ. ಚಳಿ–ಮಳೆ ಸಂಯೋಜನೆಯಿಂದ ಜ್ವರದಂತಹ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರು ಬೆಚ್ಚಗಿನ ವಾತಾವರಣದಲ್ಲೇ ಇರಲು ಸಲಹೆ ನೀಡಲಾಗಿದೆ.

ಈ ತಿಂಗಳ ಅಂತ್ಯದವರೆಗೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇರುವುದಾದರೂ, ನಂತರ ರಾಜ್ಯದಲ್ಲಿ ಚಳಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

error: Content is protected !!