ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪು ಕೋಟೆ ಸ್ಫೋಟದ ಆಘಾತ ಇನ್ನೂ ತಣಿಯುವ ಮುನ್ನ, ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಒಂಬತ್ತು ಪೊಲೀಸರ ಸಾವಿನಿಂದ ಜಮ್ಮು–ಕಾಶ್ಮೀರ್ ಭದ್ರತಾ ವಲಯ ಮತ್ತಷ್ಟು ಎಚ್ಚರಗೊಂಡಿದೆ. ಈ ನಡುವೆ ರಜೌರಿ ಜಿಲ್ಲೆಯಲ್ಲೂ ದೊಡ್ಡ ಪ್ರಮಾಣದ ಸ್ಫೋಟಕ ಪತ್ತೆಯಾಗಿರುವುದು ಪ್ರದೇಶದಲ್ಲಿ ಆತಂಕದ ವಾತಾವರಣವನ್ನು ಹೆಚ್ಚಿಸಿದೆ.
ಭದ್ರತಾ ಗಸ್ತು ನಡೆಸುತ್ತಿದ್ದ ತಂಡವು ಅಪ್ಪರ್ ಬಂಗೈ ಗ್ರಾಮದಲ್ಲಿ ಶಂಕಾಸ್ಪದ ವಸ್ತು ಗುರುತಿಸಿದ ನಂತರ, 300 ಕೆಜಿಯಷ್ಟು ಸುಧಾರಿತ ಸ್ಫೋಟಕ ಸಾಧನಗಳನ್ನು ಪತ್ತೆಹಚ್ಚಿ ನಿಯಂತ್ರಿತ ಸ್ಫೋಟದ ಮೂಲಕ ನಾಶಪಡಿಸಲಾಗಿದೆ.ಈ ಸ್ಫೋಟಕ್ಕೂ ಮುಂಚೆಯೇ, ಫರಿದಾಬಾದ್‌ನಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಅಧಿಕಾರಿಗಳ ಪ್ರಕಾರ, ಸ್ಫೋಟವು ಮೊಹಮ್ಮದ್ ಅಕ್ಬರ್ ಎಂಬವರ ಮನೆಗೆ ಸ್ವಲ್ಪ ಹಾನಿಯನ್ನುಂಟುಮಾಡಿದೆ ಎಂದು ತಿಳಿಸಿದ್ದಾರೆ, ಕುಟುಂಬವನ್ನು ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿರುವ ಸ್ಫೋಟ ಘಟನೆಗಳು ದೇಶದ ಭದ್ರತಾ ವ್ಯವಸ್ಥೆಗೆ ಹೊಸ ಸವಾಲಾಗಿ ಪರಿಣಮಿಸಿದ್ದು, ತನಿಖಾ ಸಂಸ್ಥೆಗಳು ಮೂಲ ಮತ್ತು ಸಂಚು ಶೋಧನೆಗೆ ಸಕಲ ದಿಕ್ಕುಗಳಲ್ಲಿ ಕಾರ್ಯಾಚರಣೆ ಮುಂದುವರಿಸಿದೆ.

