ಹೊಸದಿಗಂತ ವರದಿ ಚಿತ್ತಾಪುರ:
ಕಲಬುರಗಿ ಜಿಲ್ಲೆಯ ಚಿತ್ತಾಪುರದ ಆರೆಸ್ಸೆಸ್ ಪಥಸಂಚಲನಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಇಂದು ಮಧ್ಯಾಹ್ನ ಆರೆಸ್ಸೆಸ್ ಶಂಖನಾದ ಮೊಳಗಲಿದೆ.
ಸಂಘದ ಶತಮಾನೋತ್ಸವ, ವಿಜಯದಶಮಿ ಉತ್ಸವದ ಅಂಗವಾಗಿ ಕಳೆದ ಅ.19ರಂದು ನಡೆಸಬೇಕೆಂದಿದ್ದ ಪಥಸಂಚಲನಕ್ಕೆ ಸ್ಥಳೀಯ ತಾಲೂಕಾಡಳಿತ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿವೆ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸಿತ್ತು. ಇದುಬರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಜಿಲ್ಲಾಡಳಿತದ ನಿರ್ಧಾರ ಪ್ರಶ್ನಿಸಿ ಸಂಘದ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಹೈಕೋರ್ಟ್ ಮೊರೆ ಹೋಗಿದ್ದರು. ಅಂದಿನಿಂದ ಇಂದಿನವರೆಗಿನ ಒಂದು ತಿಂಗಳ ಕಾನೂನು ಸಮರದ ಬಳಿಕ ಕೊನೆಗೂ ಜಿಲ್ಲಾಡಳಿತ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಹೈಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಚಿತ್ತಾಪುರ ಪಟ್ಟಣದಲ್ಲಿಂದು ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನ ನಡೆಯಲಿದೆ.
350 ಸ್ವಯಂಸೇವಕರಿಂದ ಪಥಸಂಚಲನ:
ಹೈಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿಯ ಉತ್ಸವದ ಅಂಗವಾಗಿ ಇಂದು ನಡೆಯಲಿರುವ ಪಥಸಂಚಲನದಲ್ಲಿ 300 ಜನ ಗಣವೇಷಧಾರಿ ಸ್ವಯಸೇವಕರು ಹಾಗೂ 50 ಜನ ಘೋಷ ವಾದಕರ ತಂಡ ಸೇರಿ ಒಟ್ಟು 350 ಜನ ಗಣವೇಷಧಾರಿ ಸ್ವಯಸೇವಕರು ಮಧ್ಯಾಹ್ನ 3-30ರಿಂದ 5-45ರ ಒಳಗೆ ನಡೆಯಲಿರುವ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ.
ಇಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ, ವಿಜಯ ದಶಮಿಯ ಪಥಸಂಚಲನವು ಚಿತ್ತಾಪುರ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಪ್ರಾರಂಭವಾಗಿ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಸರ್ಕಾರಿ ಗ್ರಂಥಾಲಯ,ಬಸವ ಆಸ್ಪತ್ರೆ, ರಾಘವೇಂದ್ರ ಖಾನಾವಳಿ ರಸ್ತೆ, ಕಾಶಿ ಗಲ್ಲಿಯ ಗಣೇಶ ಮಂದಿರ, ಕೆನರಾ ಬ್ಯಾಂಕ್, ತಾಲುಕು ಪಂಚಾಯತ್ ಕಾರ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರರ ಸರ್ಕಲ್ ನಿಂದ ಮರಳಿ ಬಜಾಜ್ ಕಲ್ಯಾಣ ಮಂಟಪದಲ್ಲಿಯೇ ಸಭೆಯ ಕಾರ್ಯಕ್ರಮದೊಂದಿಗೆ ಸಂಪನ್ನಗೊಳ್ಳಲಿದೆ.
ಬಿಗಿ ಪೋಲಿಸ್ ಬಂದೋಬಸ್ತ್:
ಪೋಲಿಸ್ ಇಲಾಖೆಯಿಂದ ಈಗಾಗಲೇ ಅಧಿಕಾರಿಗಳು, ಸಿವಿಲ್ ಸೇರಿ 650, 250 ಹೋಂ ಗಾರ್ಡ್, ಕೆ. ಎಸ್. ಆರ್.ಪಿ, ಡಿಆರ್ ತುಕಡಿ ಪಡೆ ಪಟ್ಟಣದಲ್ಲಿ ನಿಯೋಜನೆ ಮಾಡಲಾಗಿದೆ. 50ರಿಂದ 60 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 5 ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

