Monday, November 17, 2025

ನಕಲಿ ನಂದಿನಿ ತುಪ್ಪ ಪ್ರಕರಣಕ್ಕೆ ಹೊಸ ತಿರುವು: ‘ಕಿಂಗ್‌ಪಿನ್’ ಹುಡುಕಾಟಕ್ಕೆ ಸಿಸಿಬಿ ಬಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಡೆಯುತ್ತಿದ್ದ ನಕಲಿ ತುಪ್ಪದ ದಂಧೆ ಈಗ ಹೊಸ ಹಂತಕ್ಕೇರಿದೆ. ಈಗಾಗಲೇ ಡಿಸ್ಟ್ರಿಬ್ಯೂಟರ್ ಮಹೇಂದ್ರ ಮತ್ತು ಮಗ ದೀಪಕ್ ಬಂಧನಗೊಂಡಿದ್ದರೂ, ಈ ವಂಚಕ ಜಾಲದ ಹಿಂದೆ ಇನ್ನೂ ದೊಡ್ಡ ಕೈ ಇದೆ ಎಂಬ ಅನುಮಾನ ಸಿಸಿಬಿ ತನಿಖೆಯಲ್ಲಿ ಗಟ್ಟಿಯಾಗುತ್ತಿದೆ. 2021ರಲ್ಲಿ ಮೈಸೂರು ಪೊಲೀಸರಿಂದ ಬಂಧಿತನಾಗಿದ್ದ ಶಿವಕುಮಾರ್, ಜೈಲಿನಿಂದ ಹೊರಬಂದ ನಂತರ ಮತ್ತೆ ಇದೇ ನಕಲಿ ತುಪ್ಪದ ದಂಧೆಗೆ ಕೈಹಾಕಿದ್ದ. ಈಗ ಸಿಸಿಬಿ ಆತನನ್ನು ಪ್ರಮುಖ ಆರೋಪಿ ಎಂದು ಗುರುತಿಸಿ ಹುಡುಕಾಟ ಆರಂಭಿಸಿದೆ.

ಮಹೇಂದ್ರನಿಗೆ ಸಣ್ಣ ಪ್ರಮಾಣದ ನಂದಿನಿ ತುಪ್ಪ ಖರೀದಿಸಿ ಅದಕ್ಕೆ ನಕಲಿ ಪೂರಕ ಮಿಶ್ರಣ ಬೆರೆಸಿ ಮರುಮಾರಾಟ ಮಾಡುವಂತೆ ಸೂಚಿಸಿದ್ದವರಲ್ಲಿ ಶಿವಕುಮಾರ್ ಹೆಸರು ಮುಂಚಿತವಾಗಿ ಕೇಳಿಬರುತ್ತಿದೆ. ಅವನು ತನ್ನ ಜಾಲ ವಿಸ್ತರಿಸಲು ಮಹೇಂದ್ರನಂಥ ಡಿಸ್ಟ್ರಿಬ್ಯೂಟರ್‌ಗಳನ್ನು ಬಳಸಿಕೊಂಡಿದ್ದಾನೆ ಎನ್ನುವ ಶಂಕೆ ತನಿಖೆಯನ್ನು ಇನ್ನಷ್ಟು ದಿಕ್ಕು ತೋರಿಸಿದೆ.

ಮಗಳ ಮದುವೆ ಇರುವ ಕಾರಣ ಇದೀಗ ಮಹೇಂದ್ರನನ್ನು ಕೋರ್ಟ್ ಮಧ್ಯಂತರ ಜಾಮೀನಿನಲ್ಲಿ ಬಿಡಲಾಗಿದೆ. ಆದರೆ ಮಗ ದೀಪಕ್‌ಗೆ ಯಾವುದೇ ರಿಯಾಯಿತಿ ಕೊಡದೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಎರಡು ವರ್ಷಗಳಿಂದ ಕೆಎಂಎಫ್‌ನಿಂದ ಖರೀದಿ ಪ್ರಮಾಣ ಕಡಿಮೆ ಮಾಡುತ್ತಿದ್ದರೂ, ಬೂತ್‌ಗಳಿಗೆ ಪೂರೈಕೆ ಹಿಂದಿನಂತೆಯೇ ಮುಂದುವರಿದಿತ್ತು. ಈ ವ್ಯತ್ಯಾಸವನ್ನು ವಿಜಿಲೆನ್ಸ್ ಅಧಿಕಾರಿಗಳು ಗಮನಿಸಿ ನಿಜಾಂಶ ಹೊರತೆಗೆದಾಗ ನಕಲಿ ತುಪ್ಪದ ಜಾಲ ಸಂಪೂರ್ಣ ಬಯಲಾಯಿತು.

error: Content is protected !!