Monday, November 17, 2025

Delhi Blast | ‘ಡ್ರಾಫ್ಟ್‌ ಇ–ಮೇಲ್‌’ ಮೂಲಕ ಸಂವಹನ: ವೈಟ್‌ ಕಾಲರ್‌ ಉಗ್ರರ ಡೆಡ್ ಡ್ರಾಪ್ ಸೀಕ್ರೆಟ್ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಕೆಂಪುಕೋಟೆ ಬಳಿಯ ಸಂಭವಿಸಿದ ಭೀಕರ ಕಾರು ಸ್ಫೋಟದ ತನಿಖೆ ದಿನೇದಿನೇ ಹೊಸ ತಿರುವು ಪಡೆಯುತ್ತಿದ್ದು, ಪ್ರಕರಣದ ಆರೋಪಿ ವೈಟ್ ಕಾಲರ್‌ ಉಗ್ರರ ಸಂವಹನ ವಿಧಾನವೇ ಈಗ ತನಿಖಾ ಸಂಸ್ಥೆಗಳಿಗೆ ಮತ್ತೊಂದು ದೊಡ್ಡ ಕುರುಹಾಗಿದೆ. ಸ್ಫೋಟದ ಹಿಂದೆ ನಿಂತಿದ್ದವರ ಗುಪ್ತ ಸಂಪರ್ಕ, ಅವರು ಬಳಸಿದ ತಂತ್ರಜ್ಞಾನ ಮತ್ತು ಸಂವಹನ ಮಾದರಿ ಎಲ್ಲವೂ ಈಗ ಹೊರಬರುತ್ತಿವೆ. ಈ ವಿಧಾನಗಳು ಭದ್ರತಾ ವ್ಯವಸ್ಥೆಯನ್ನೇ ಮೀರಿಸುವಷ್ಟು ಸೂಕ್ಷ್ಮವಾಗಿದ್ದವು ಎನ್ನುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ.

ಪ್ರಕರಣದ ಕೇಂದ್ರಬಿಂದುವಾಗಿರುವುದು ‘ಇ-ಮೇಲ್ ಡ್ರಾಫ್ಟ್’ ವಿಧಾನ. ಆರೋಪಿಗಳು ಇಮೇಲ್ ಕಳಿಸುವ ಬದಲು ಒಂದೇ ಇಮೇಲ್ ಖಾತೆಯನ್ನು ಬಳಸಿಕೊಂಡು, ಸಂದೇಶಗಳು, ಚಿತ್ರಗಳು, ಲೊಕೇಶನ್‌ ಮಾಹಿತಿ ಎಲ್ಲವನ್ನು ಡ್ರಾಫ್ಟ್ ಫೋಲ್ಡರ್‌ನಲ್ಲಿ ಸೇವ್ ಮಾಡುತ್ತಿದ್ದರು. ಇದು ‘ಡೆಡ್ ಡ್ರಾಪ್ ಸೀಕ್ರೆಟ್’ ಎಂದು ಪರಿಚಿತವಾದ, ಜಾಲತಾಣದಲ್ಲಿ ಸೀಕ್ರೆಟ್ ಬಿಟ್ಟುಕೊಡದ ಸಂವಹನ ವಿಧಾನ. ಇಮೇಲ್ ಕಳುಹಿಸದಿರುವುದರಿಂದ ಭದ್ರತಾ ಸಂಸ್ಥೆಗಳ ರೇಡಾರ್‌ಗೆ ಸುಲಭವಾಗಿ ಸಿಲುಕದಂತೆ ನೋಡಿಕೊಳ್ಳಲಾಗುತ್ತಿತ್ತು ಎಂದು ತನಿಖಾ ಮೂಲಗಳು ಹೇಳಿವೆ.

ಈ ಸಂವಹನ ಜಾಲದಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ಮೂವರು ವೈದ್ಯಕೀಯ ವೃತ್ತಿಪರರು—ಡಾ. ಉಮರ್ ನಬಿ, ಡಾ. ಮುಜಮ್ಮಿಲ್ ಗನಿ ಮತ್ತು ಡಾ. ಶಾಹೀನ್ ಶಾಹಿದ್—ಸಕ್ರಿಯವಾಗಿದ್ದರೆಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಇವರ ಮೂವರೂ ಒಂದೇ ಖಾತೆಯನ್ನು ಬಳಸಿಕೊಂಡಿದ್ದು, ಡ್ರಾಫ್ಟ್‌ನಲ್ಲಿ ಉಳಿಸಲಾದ ಸಂದೇಶಗಳು ಯಾವುದೇ ನೆಟ್ವರ್ಕ್‌ ಟ್ರಾನ್ಸ್ಫರ್‌ ಆಗದೇ ಇರುವುದರಿಂದ ಪತ್ತೆ ಹಚ್ಚುವುದು ಅತ್ಯಂತ ಕಷ್ಟವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೇ ಅಲ್ಲ, ನಕ್ಷೆಗಳು ಮತ್ತು ಲೊಕೇಶನ್ ವಿವರಗಳಿಗಾಗಿ ‘ಮಾ’ ಎಂಬ ಗೂಢಲಿಪಿಯ ಇನ್‌ಸ್ಟಂಟ್ ಮೆಸೇಜಿಂಗ್ ಆಪ್ ಸಹ ಬಳಸಲಾಗುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ.

error: Content is protected !!