ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರಿಗೆ ಕಿಡ್ನಿ ದಾನ ನೀಡಿದ್ದ ಪುತ್ರಿ ರೋಹಿಣಿ ಆಚಾರ್ಯ, ತಮ್ಮ ಕುಟುಂಬದಿಂದಲೇ ಅವಮಾನಕ್ಕೆ ಗುರಿಯಾಗಿರುವುದಾಗಿ ಎಕ್ಸ್‌ನಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಬರೆದು ಆಕ್ರೋಶ ಹೊರಹಾಕಿದ್ದಾರೆ.
ತಂದೆಗೆ ನನ್ನ ಕಿಡ್ನಿ ನೀಡಿದ್ದಕ್ಕೆ ಕೊಳಕು ಕಿಡ್ನಿ ನೀಡಿದ್ದೇನೆ ಎಂದು ನನ್ನನ್ನು ನಿಂದಿಸಿದ್ದಾರೆ ಎಂದು ರೋಹಿಣಿ ಆಚಾರ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕುಟುಂಬದ ಒಳಜಗಳವನ್ನು ನೇರವಾಗಿ ಸಾರ್ವಜನಿಕ ವೇದಿಕೆಗೆ ತಂದಿದ್ದಾರೆ.
ಬೆಳಿಗ್ಗೆ ತನ್ನ ಮೇಲೆಯೇ ಚಪ್ಪಲಿ ಎಸೆಲಾಗಿದೆ, ಚುನಾವಣಾ ಟಿಕೆಟ್‌ಗಾಗಿ ಕಿಡ್ನಿ ದಾನ ಮಾಡಿದಂತೆ ಆರೋಪಿಸಲಾಗಿದೆ ಎಂದು ರೋಹಿಣಿ ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆಯಾದ ಹೆಣ್ಣುಮಕ್ಕಳು ತಂದೆ–ತಾಯಿಗಳಿಗೆ ತಮಗೇನು ಸಾಧ್ಯವೋ ಅದಕ್ಕಿಂತ ಹೆಚ್ಚು ಹೊಣೆ ಹೊರುವುದರ ಅಗತ್ಯವಿಲ್ಲ ಎಂದು ಸಂದೇಶ ನೀಡಿರುವ ಅವರು, ತಂದೆಯನ್ನು ಉಳಿಸಲು ಮಾಡಿದ ಬಲಿದಾನಕ್ಕೂ ಈಗ ತಾನು ಅವಮಾನಕ್ಕೊಳಗಾಗುತ್ತಿದ್ದೇನೆ ಎಂಬ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ರೋಹಿಣಿ ತಮ್ಮ ಪೋಸ್ಟ್‌ನಲ್ಲಿ, ತನ್ನ ಗಂಡ ಹಾಗೂ ಅತ್ತೆ–ಮಾವನ ಅನುಮತಿಯಿಲ್ಲದೇ ಕಿಡ್ನಿ ದಾನ ಮಾಡಿದ್ದೆ ಎಂಬುದನ್ನು ನೆನಪಿಸಿಕೊಂಡು, “ಇದು ನನ್ನ ದೊಡ್ಡ ತಪ್ಪು, ನನ್ನಂಥ ಮಗಳು ಯಾರಿಗೂ ಸಿಗಬಾರದು” ಎಂದು ಭಾವುಕರಾಗಿದ್ದಾರೆ. ತನ್ನ ಮಕ್ಕಳು, ಕುಟುಂಬವನ್ನು ಕಡೆಗಣಿಸಿ ತಂದೆಗಾಗಿ ಮಾಡಿದ ತ್ಯಾಗವೇ ಈಗ ತಮ್ಮ ಮೇಲೆ ಅಪವಾದ ಬಂದಿದೆ ಎಂದು ಅವರು ಬರೆದಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷ ಸೋಲು ಕಂಡ ನಂತರದಿಂದಲೇ ಯಾದವ್ ಕುಟುಂಬದ ಒಳಜಗಳ ಹೆಚ್ಚಾಗಿದೆ. ರೋಹಿಣಿ ಆಚಾರ್ಯ ಪಕ್ಷದ ಸೋಲಿಗೆ ಕಾರಣವೆಂದು ಕೆಲವರು ದೂಷಿಸುತ್ತಿದ್ದಾರೆ ಎನ್ನುವುದು ಅವರ ಇನ್ನೊಂದು ದೂರ. ತೇಜಸ್ವಿ ಯಾದವ್ ಪಕ್ಷದ ಮುಖವಾಗಿದ್ದರೂ, ನಿರ್ಧಾರಗಳು ಸಂಜಯ್ ಯಾದವ್ ಮತ್ತು ರಮೀಜ್ ಕೈಯಲ್ಲಿ ನಡೆಯುತ್ತಿವೆ ಎಂಬ ಆರೋಪವನ್ನು ರೋಹಿಣಿ ನೇರವಾಗಿ ಮಾಡಿದ್ದಾರೆ.
ಇದರ ಮಧ್ಯೆ, ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬ ಈಗ ಎರಡನೇ ಬಾರಿ ಸಾರ್ವಜನಿಕ ವಿವಾದಕ್ಕೆ ಒಳಗಾಗಿದೆ. ಮೊದಲ ಮಗ ತೇಜ್ ಪ್ರತಾಪ್ ಯಾದವ್ ಕುಟುಂಬದಿಂದ ದೂರಾಗಿ ತನ್ನದೇ ಪಕ್ಷ ಆರಂಭಿಸಿದ್ದನ್ನು ಗಮನಿಸಿದರೆ, ರೋಹಿಣಿಯ ಈ ನಿರ್ಧಾರವು ಯಾದವ್ ಕುಟುಂಬ ಕಲಹ ಮತ್ತಷ್ಟು ಗಂಭೀರ ಹಂತಕ್ಕೆ ತಲುಪಿದೆ ಎಂಬ ಅನುಮಾನ ವ್ಯಕ್ತವಾಗಿದೆ.

