Monday, November 17, 2025

ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಕೇಸ್: ಮೂರು ಪ್ರತ್ಯೇಕ FIR ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.

ಮುಧೋಳ‌ ನಗರದಲ್ಲಿ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ಮಾಡಿದ ರೈತರು ಸಂಜೆ ಗೋದಾವರಿ ಸಕ್ಕರೆ ಕಾರ್ಖಾನೆಗೆ ‌ಮುತ್ತಿಗೆ ಹಾಕಲು ಹೊರಟಿದ್ದರು. ಈ ವೇಳೆ ಉದ್ರಿಕ್ತರು ಸಂಗಾನಟ್ಟಿ ಬಳಿ ಎರಡು ಟ್ರೇಲರ್​ನ ಟ್ರ್ಯಾಕ್ಟರ್ ತಳ್ಳಿ ಬೆಂಕಿ ಹಚ್ಚಿದ್ದರು. ನಂತರ‌ ಗೋದಾವರಿ ಕಾರ್ಖಾನೆ ಆವರಣದಲ್ಲಿನ 20ಕ್ಕೂ ಅಧಿಕ ಟ್ರ್ಯಾಕ್ಟರ್​​ಗಳಿಗೆ ಬೆಂಕಿ ಹಚ್ಚಲಾಗಿತ್ತು. ಐದು ಬೈಕ್​​ ಬೆಂಕಿಗಾಹುತಿಯಾಗಿದ್ದವು.

ಇನ್ನು ಘಟನೆ ವೇಳೆ ಕಲ್ಲು ತೂರಾಟ ನಡೆದಿತ್ತು. ಇದೇ ವೇಳೆ ಎಎಸ್​ಪಿ ಮಹಾಂತೇಶ್ವರ ಜಿದ್ದಿ ಅವರ ಕಾಲು‌ ಮುರಿದಿತ್ತು. ಈ ಹಿನ್ನೆಲೆ ಘಟನೆಗೆ ಸಂಬಂಧಿಸಿದಂತೆ‌ ಮಹಾಲಿಂಗಪುರ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್​ಐಆರ್​ ದಾಖಲಾಗಿವೆ. ಅದರಲ್ಲೂ ಕಾರ್ಖಾನೆ‌ ಪರ ಬಂದ ಐವರ ವಿರುದ್ಧ ಪೊಲೀಸ್ ಅಧಿಕಾರಿಗಳ ಕೊಲೆ ಯತ್ನ ಎಂದು ಎಫ್​ಐಆರ್ ದಾಖಲಾಗಿದೆ.

ಎಫ್​ಐಆರ್​ 2ರಲ್ಲಿ ಹೋರಾಟದ ಮುಂದಾಳತ್ವ ವಹಿಸಿದ್ದ ರೈತರ ಮೇಲೆ ಎಫ್​​ಐಆರ್ ದಾಖಲಿಸಲಾಗಿದೆ. ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಸುಭಾಷ್ ಶಿರಬೂರ, ಈರಪ್ಪ ಹಂಚಿನಾಳ, ಮುತ್ತಪ್ಪ ಕೋಮಾರ, ಹನುಮಂತ ಗೌಡ ಪಾಟಿಲ್, ದುಂಡಪ್ಪ ಯರಗಟ್ಟಿ, ಬಸಪ್ಪ ಸಂಗಣ್ಣವರ, ಸುರೇಶ್ ಚಿಂಚಲಿ, ಸದಾಶಿವ ಸಕರೆಡ್ಡಿ, ರಾಚಪ್ಪ ಕಲ್ಲೊಳ್ಳಿ, ಗಂಗಾಧರ‌ ಮೇಟಿ, ಮಹೇಶ್ ಗೌಡ ಪಾಟಿಲ್, ಹನುಮಂತ ನಬಾಬ್‌ ಸೇರಿದಂತೆ ಸೇರಿದಂತೆ 17 ಜನರ ವಿರುದ್ಧ ತೇರದಾಳ ಪಿಎಸ್​ಐ ಶಿವಾನಂದ ಸಿಂಗನ್ನವರ ದೂರಿನ ಮೇರೆಗೆ ಸಾರ್ವಜನಿಕ ಆಸ್ತಿ ಹಾನಿಯಡಿ ಎಫ್​​​ಐಆರ್​​ ದಾಖಲಿಸಲಾಗಿದೆ.

ಎಫ್​ಐಆರ್​ 3 ಪ್ರಕಾರ ಕಾರ್ಖಾನೆ ಸಿಬ್ಬಂದಿಯಿಂದ ಒಂದು ಎಫ್​ಐಆರ್ ಆಗಿದೆ. 100 ರಿಂದ150 ಅಪರಿಚಿತರ ವಿರುದ್ಧ ಕಾರ್ಖಾನೆ ಸಿಬ್ಬಂದಿ ಮಲ್ಲಿಕಾರ್ಜುನ ಗುಗ್ಗರಿ ಎಂಬುವರಿಂದ ಎಫ್​ಐಆರ್​ ದಾಖಲಿಸಲಾಗಿದೆ. ಬಿಎನ್ ಎಸ್ 189(2),191(2),191(3),324(4),324(5),190 ಕಾರ್ಖಾನೆ ಆವರಣದೊಳಗೆ‌ ನುಗ್ಗಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಬೈಕ್​​ಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡಿದ್ದಾರೆ ಎಂದು ಎಫ್​​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

error: Content is protected !!