ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (NIA)ದೆಹಲಿಯಲ್ಲಿ ಬಂಧಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್‌ನ ಸಂಬೂರಾದ ನಿವಾಸಿ ಅಮೀರ್ ರಶೀದ್ ಬಂಧಿತ ಆರೋಪಿ.
ಈ ಕುರಿತು ಎನ್‌ಐಎ ಮಾಹಿತಿ ಹಂಚಿಕೊಂಡಿದ್ದು, ಭಯೋತ್ಪಾದಕ ದಾಳಿಯನ್ನು ನಡೆಸಲು ಆರೋಪಿ ಆತ್ಮಹತ್ಯಾ ಬಾಂಬರ್ ಉಮರ್ ನಬಿ ಜೊತೆ ಸೇರಿ ಸಂಚು ರೂಪಿಸಿದ್ದಾನೆ ಎಂದು ತಿಳಿಸಿದೆ.
https://x.com/NIA_India/status/1990051171546153320
ಸ್ಫೋಟಕ್ಕೆ ಬಳಕೆಯಾಗಿದ್ದ ಐ20 ಕಾರು ಅಮೀರ್ ರಶೀದ್ ಹೆಸರಿನಲ್ಲಿ ನೋಂದಣಿಯಾಗಿತ್ತು. ಈ ಕಾರನ್ನು ಅಮೀರ್ ಉಮರ್ ನಬಿಗೆ ನೀಡಿದ್ದ. ಅಂತಿಮವಾಗಿ ಈ ಕಾರಿನಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಇಡಲಾಗಿತ್ತು . ಐ20 ಕಾರನ್ನು ಚಲಾಯಿಸಿದ ಚಾಲಕ ಪುಲ್ವಾಮಾ ಜಿಲ್ಲೆಯ ನಿವಾಸಿ ಮತ್ತು ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಉಮರ್ ಉನ್ ನಬಿ ಎನ್ನವುದು ವಿಧಿವಿಜ್ಞಾನದ ಪ್ರಯೋಗಾಲಯದ ಮೂಲಕ ದೃಢಪಟ್ಟಿದೆ.
ನಬಿಗೆ ಸೇರಿದ ಮತ್ತೊಂದು ವಾಹನವನ್ನು ಸಹ ವಶಪಡಿಸಿಕೊಂಡಿದೆ. ನವೆಂಬರ್ 10 ರಂದು ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ ಸ್ಫೋಟದಲ್ಲಿ ಗಾಯಗೊಂಡವರು ಸೇರಿದಂತೆ 73 ಸಾಕ್ಷಿಗಳನ್ನು ಇಲ್ಲಿಯವರೆಗೆ ವಿಚಾರಣೆ ನಡೆಸಲಾಗಿದೆ. ತನಿಖೆ ಮುಂದುವರಿದಿದ್ದು ಸಾಕ್ಷ್ಯಕ್ಕಾಗಿ ವಾಹನವನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

