ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರವನ್ನು ಬೆಂಗಳೂರು ಜಿಲ್ಲೆಯೊಂದಿಗೆ ವಿಲೀನಗೊಳಿಸಿದ ಬೆನ್ನಲ್ಲೇ, ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕನ್ನು ಕೂಡ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೆ ಆರಂಭಗೊಂಡಿದೆ. ಈ ಕುರಿತು ಮುಖ್ಯಮಂತ್ರಿ ಕಚೇರಿಯಿಂದಲೇ ಪತ್ರ ಚಲಾವಣೆಯಾಗಿದ್ದು, ಕುಣಿಗಲ್ ಜನರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಸೇರ್ಪಡೆ ಕಸರತ್ತು ಶುರು:
ಕುಣಿಗಲ್ ತಾಲೂಕನ್ನು ಸಂಪೂರ್ಣವಾಗಿ ತುಮಕೂರು ಜಿಲ್ಲೆಯಿಂದ ಬೇರ್ಪಡಿಸಿ ಬೆಂಗಳೂರು ಜಿಲ್ಲೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ‘ಬೆಂಗಳೂರಿಗೆ ಕುಣಿಗಲ್ ಸೇರ್ಪಡೆ ಸಮಿತಿ’ ಎಂಬ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿ ಆಧರಿಸಿ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಶಾಂತಪ್ಪನವರು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಕ್ರಮಕೈಗೊಳ್ಳುವಂತೆ ಪತ್ರ ಬರೆದಿರುವುದು ಈಗ ವೈರಲ್ ಆಗಿದೆ.
ವಿಲೀನಕ್ಕೆ ಕಾರಣವೇನು?
ಕುಣಿಗಲ್ ತಾಲೂಕು ತುಮಕೂರು ಜಿಲ್ಲಾ ಕೇಂದ್ರಕ್ಕೆ 38 ಕಿ.ಮೀ. ಸಮೀಪವಿದ್ದರೂ, ರಾಜಧಾನಿ ಬೆಂಗಳೂರಿಗೆ ಕೇವಲ 72 ಕಿ.ಮೀ ದೂರವಿದೆ. ಉದ್ಯೋಗ, ಶಿಕ್ಷಣ, ವಾಣಿಜ್ಯ ಮತ್ತು ಸಾಮಾಜಿಕ ಸಂಬಂಧಗಳ ದೃಷ್ಟಿಯಿಂದ ಕುಣಿಗಲ್ ಜನರಿಗೆ ಬೆಂಗಳೂರಿನೊಂದಿಗಿನ ಒಡನಾಟವೇ ಹೆಚ್ಚಾಗಿದೆ. ಅಲ್ಲದೆ, ತಾಲೂಕು ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಎಲ್ಲ ಕಾರಣಗಳಿಂದ ವಿಲೀನಕ್ಕೆ ಬೇಡಿಕೆ ಇಡಲಾಗಿದೆ.
‘ಡಿಕೆ ಬ್ರದರ್ಸ್’ ಮೇಲೆ ಗಂಭೀರ ಆರೋಪ:
ಈ ಪ್ರಸ್ತಾಪದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರ ಕೈವಾಡವಿದೆ ಎಂದು ಹೋರಾಟಗಾರ ಜಿ.ಕೆ. ನಾಗಣ್ಣ ಗಂಭೀರ ಆರೋಪ ಮಾಡಿದ್ದಾರೆ. “ರಾಮನಗರವನ್ನು ಬೆಂಗಳೂರು ಜಿಲ್ಲೆಗೆ ವಿಲೀನಗೊಳಿಸಿದ ಡಿಕೆ ಬ್ರದರ್ಸ್ ಈಗ ಕುಣಿಗಲ್ ತಾಲೂಕನ್ನೂ ದೋಚಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದಲ್ಲದೆ, ಕುಣಿಗಲ್ ಶಾಸಕ ಡಾ. ರಂಗನಾಥ್ ಅವರ ಸಂಬಂಧಿ ಎಂಬ ಕಾರಣಕ್ಕೆ ಡಿಕೆ ಶಿವಕುಮಾರ್ ಅವರು ಈ ಕೆಲಸ ಮಾಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ತುಮಕೂರು ಪರ ಜನಸಾಮಾನ್ಯರ ಒತ್ತಾಯ:
ಆಡಳಿತಾತ್ಮಕ ದೃಷ್ಟಿಯಿಂದ ಕುಣಿಗಲ್ ತಾಲೂಕಿಗೆ ತುಮಕೂರು ಜಿಲ್ಲಾ ಕೇಂದ್ರ ಹತ್ತಿರ ಇರುವುದರಿಂದ ಸ್ಥಳೀಯರಿಗೆ ಸುಲಭವಾಗುತ್ತದೆ. ಒಂದು ವೇಳೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಿದರೆ ಜನರಿಗೆ ಓಡಾಟದ ತೊಂದರೆ ಹೆಚ್ಚಾಗಲಿದೆ. ಹೀಗಾಗಿ, ಕುಣಿಗಲ್ ತಾಲೂಕನ್ನು ತುಮಕೂರು ಜಿಲ್ಲೆಯಲ್ಲೇ ಉಳಿಸಿಕೊಳ್ಳಬೇಕು ಎಂದು ಸ್ಥಳೀಯರು ಬಲವಾಗಿ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಡಾ. ರಂಗನಾಥ್ ಅವರು, ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕುಣಿಗಲ್ ತಾಲೂಕು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ವಿಲೀನಗೊಳ್ಳುತ್ತದೆಯೇ ಅಥವಾ ತುಮಕೂರು ಜಿಲ್ಲೆಯಲ್ಲೇ ಉಳಿಯುತ್ತದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದಿಂದ ತಿಳಿದುಬರಲಿದೆ.

