ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲೇ ಅತಿದೊಡ್ಡ ‘ಡಿಜಿಟಲ್ ಅರೆಸ್ಟ್’ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಇಂದಿರಾನಗರದ 57 ವರ್ಷದ ಟೆಕ್ ಕ್ಷೇತ್ರದ ಮಹಿಳೆಯೊಬ್ಬರು ಸೈಬರ್ ಕಳ್ಳರ ಕುತಂತ್ರದ ಜಾಲಕ್ಕೆ ಸಿಲುಕಿ ಬರೋಬ್ಬರಿ ₹31.83 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಈ ಮಾದರಿಯ ವಂಚನೆಯಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಗರಿಷ್ಠ ಮೊತ್ತ ಇದಾಗಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.
ವಂಚನೆಯ ಜಾಲ ಹೆಣೆಯಲ್ಪಟ್ಟಿದ್ದು ಹೀಗೆ:
ಸಂತ್ರಸ್ತೆಯು ಆರು ತಿಂಗಳಿಗೂ ಹೆಚ್ಚು ಕಾಲ ಸೈಬರ್ ವಂಚಕರ ನಿರಂತರ ಕಣ್ಗಾವಲಿನಲ್ಲಿ ಇದ್ದರು.
ಆರಂಭಿಕ ಕರೆ (ಸೆಪ್ಟೆಂಬರ್ 15, 2024): ಡಿಎಚ್‌ಎಲ್ ಕೊರಿಯರ್ ಸೇವೆಯಿಂದ ಬಂದವನೆಂದು ಹೇಳಿಕೊಂಡ ವ್ಯಕ್ತಿಯು ಕರೆ ಮಾಡಿ, ಮಹಿಳೆಯ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳು, ಪಾಸ್‌ಪೋರ್ಟ್‌ಗಳು ಮತ್ತು ನಿಷೇಧಿತ MDMA ಮಾದಕ ದ್ರವ್ಯಗಳಿರುವ ಪ್ಯಾಕೇಜ್ ಮುಂಬೈಗೆ ಬಂದಿರುವುದಾಗಿ ಹೇಳಿದ್ದಾನೆ. ಮಹಿಳೆ ತನಗೂ ಇದಕ್ಕೂ ಸಂಬಂಧವಿಲ್ಲ ಎಂದಾಗ, ಇದು ಸೈಬರ್ ಅಪರಾಧವಾಗಿರಬಹುದು ಎಂದು ಭಯ ಹುಟ್ಟಿಸಿದ್ದಾನೆ.
ಸಿಬಿಐ ಅಧಿಕಾರಿಗಳ ಸೋಗು: ಕೂಡಲೇ ಕರೆಯನ್ನು ಸಿಬಿಐ ಅಧಿಕಾರಿಯಂತೆ ನಟಿಸಿದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಯಿತು. ಈ ವಂಚಕರು, ಮಹಿಳೆಯ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿ, ಸ್ಥಳೀಯ ಪೊಲೀಸರನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ವಿಷಯ ಬಹಿರಂಗಪಡಿಸಿದರೆ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದರು.
‘ಗೃಹಬಂಧನ’ ಮತ್ತು ಸ್ಕೈಪ್ ಕಣ್ಗಾವಲು: ವಂಚಕರ ಮಾತುಗಳಿಗೆ ಹೆದರಿದ ಸಂತ್ರಸ್ತೆಯನ್ನು ಕೆಲವು ದಿನಗಳ ನಂತರ ಸ್ಕೈಪ್ ವಿಡಿಯೋ ಕರೆಯ ಮೂಲಕ ‘ಗೃಹಬಂಧನ’ಕ್ಕೆ ಒಳಪಡಿಸಲಾಯಿತು. ಸಿಬಿಐ ಅಧಿಕಾರಿ ‘ಪ್ರದೀಪ್ ಸಿಂಗ್’ ಎಂದು ಹೇಳಿಕೊಂಡ ವ್ಯಕ್ತಿಯು ‘ರಾಹುಲ್ ಯಾದವ್’ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಮಹಿಳೆಯನ್ನು ಒಂದು ವಾರದ ಕಾಲ ಮೇಲ್ವಿಚಾರಣೆ ಮಾಡಲು ನಿಯೋಜಿಸಿದ. ಈ ಸಂದರ್ಭದಲ್ಲಿ ಮಹಿಳೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು.
ಆಸ್ತಿ ಘೋಷಣೆ ಮತ್ತು ಹಣ ವರ್ಗಾವಣೆ: ಸೆಪ್ಟೆಂಬರ್ 23, 2024 ರಂದು, ‘ಪ್ರದೀಪ್ ಸಿಂಗ್’ ಸೂಚನೆಯಂತೆ ಮಹಿಳೆಯು ಆರ್‌ಬಿಐನ ಹಣಕಾಸು ಗುಪ್ತಚರ ಘಟಕಕ್ಕೆ ತಮ್ಮ ಆಸ್ತಿಗಳನ್ನು ಘೋಷಣೆ ಮಾಡಿದರು. ನಂತರ ಹಂತ ಹಂತವಾಗಿ ಹಣ ವಸೂಲಿ ಮಾಡುವ ಪ್ರಕ್ರಿಯೆ ಆರಂಭವಾಯಿತು.
187 ವಹಿವಾಟು, 31.83 ಕೋಟಿ ಗೋವಿಂದಾ:
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ವಂಚಕರ ಸೂಚನೆಯಂತೆ ಮಹಿಳೆಯು ತಮ್ಮ ಸ್ಥಿರ ಠೇವಣಿಗಳನ್ನು ಹೊರತುಪಡಿಸಿ, ಉಳಿದಿದ್ದ ಉಳಿತಾಯದ ₹31.83 ಕೋಟಿ ಹಣವನ್ನು 187 ವಹಿವಾಟುಗಳಲ್ಲಿ ಸೈಬರ್ ಕಳ್ಳರ ಖಾತೆಗೆ ವರ್ಗಾಯಿಸಿದ್ದಾರೆ. 2025ರ ಫೆಬ್ರವರಿ ಒಳಗೆ ಪರಿಶೀಲನೆ ಮಾಡಿ ಹಣವನ್ನು ಹಿಂದಿರುಗಿಸುವುದಾಗಿ ನಕಲಿ ಅಧಿಕಾರಿಗಳು ಭರವಸೆ ನೀಡಿದ್ದರು ಮತ್ತು ‘ಕ್ಲಿಯರೆನ್ಸ್ ಸರ್ಟಿಫಿಕೇಟ್’ ಕೂಡ ನೀಡಿದ್ದರು.
ಹಣ ಮರಳಿ ನೀಡಲು ವಂಚಕರು ಸತತವಾಗಿ ನೆಪ ಹೇಳಲು ಆರಂಭಿಸಿದಾಗ ಸಂತ್ರಸ್ತೆಗೆ ಅನುಮಾನ ಬಂದು, 2025ರ ನವೆಂಬರ್ 14 ರಂದು ಬೆಂಗಳೂರು ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

