ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗಳನ್ನು ಮಾಡೆಲ್ ಆಗಿ ನೋಡಬೇಕೆಂಬ ಆಸೆಯನ್ನು ದುರುಪಯೋಗಪಡಿಸಿಕೊಂಡ ಸೈಬರ್ ವಂಚಕರು ನಗರದ ಮಹಿಳೆಯಿಂದ 3.74 ಲಕ್ಷ ರೂ. ದೋಚಿದ ಘಟನೆ ನಡೆದಿದೆ. ಮಾಡೆಲಿಂಗ್ ಅವಕಾಶದ ಹೆಸರಿನಲ್ಲಿ ನಡೆದಿರುವ ಈ ವಂಚನೆ ಈಗ ಸೈಬರ್ ಅಪರಾಧದ ಮತ್ತೊಂದು ಉದಾಹರಣೆಯಾಗಿದೆ.
ವಿದ್ಯಾರಣ್ಯಪುರದಲ್ಲಿ ವಾಸಿಸುವ ಸುಮಾ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ‘ಲಿಟ್ಲ್ ನೆಸ್ಟ್’ ಎಂಬ ಚೈಲ್ಡ್ ಮಾಡೆಲಿಂಗ್ ಜಾಹೀರಾತನ್ನು ನೋಡಿ ಲಿಂಕ್‌ನ್ನು ಕ್ಲಿಕ್ ಮಾಡಿದ್ದರು. ಲಿಂಕ್ ಮೂಲಕವೇ ಮಗಳ ವಿವರಗಳನ್ನು ಪಡೆದುಕೊಂಡ ವಂಚಕರು, ಬಳಿಕ ಮತ್ತೊಂದು ಲಿಂಕ್ ಕಳುಹಿಸಿ ಟೆಲಿಗ್ರಾಂ ಗ್ರೂಪ್‌ಗೆ ಸೇರಿಕೊಳ್ಳುವಂತೆ ಹೇಳಿದ್ದಾರೆ.
ಮೊದಲಿಗೆ “ಟಾಸ್ಕ್” ಎಂಬ ಹೆಸರಿನಲ್ಲಿ 11 ಸಾವಿರ ರೂಪಾಯಿ ಕಳುಹಿಸಲು ಹೇಳಿದ ಅಡ್ಮಿನ್, ಹಣ ಹೂಡಿಕೆ ಮಾಡಿದ ಬಳಿಕ 19 ಸಾವಿರ ರೂ. ವಾಪಸ್ ನೀಡಿ ನಂಬಿಕೆ ಮೂಡಿಸಿದರು. ನಂತರ ಹಂತ ಹಂತವಾಗಿ ಹಲವು ವ್ಯವಹಾರಗಳ ಮೂಲಕ ಒಟ್ಟು ಮೂರು ಮುಕ್ಕಾಲು ಲಕ್ಷ ರೂಪಾಯಿಯನ್ನು ಸುಲಭವಾಗಿ ಕಸಿದುಕೊಂಡಿದ್ದಾರೆ.
ಮೊಸದ ಅರಿವಾದ ನಂತರ ಸುಮಾ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.

