ಹೊಸದಿಗಂತ ಡಿಜಿಟಲ್ ಡೆಸ್ಕ್:
ದೋಹಾದಲ್ಲಿ ನಡೆದ ಭಾರತ ಎ–ಪಾಕಿಸ್ತಾನ್ ಎ ಟಿ20 ಪಂದ್ಯವು ಕೇವಲ ರನ್‌ಗಳ ಹೋರಾಟದಿಂದಷ್ಟೇ ಅಲ್ಲ, ಅಂಪೈರ್ ತೀರ್ಪಿನ ವಿವಾದದಿಂದಲೂ ಎಲ್ಲರ ಗಮನ ಸೆಳೆದಿದೆ. ಹೈ ಟೆನ್ಷನ್ ಕ್ಷಣದಲ್ಲಿ ಬಂದ ‘ನಾಟೌಟ್’ ತೀರ್ಪು ಮೈದಾನದಲ್ಲೂ, ಅಭಿಮಾನಿಗಳ ನಡುವೊ ಗೊಂದಲ ಮೂಡಿಸಿತು. ಈ ಗಲಾಟೆಗೆ ಕಾರಣವಾದದ್ದು ಐಸಿಸಿಯ ಹೊಸ ಫೀಲ್ಡಿಂಗ್ ನಿಯಮ.
ದೋಹಾದ ಈಸ್ಟ್ ಎಂಡ್ ಇಂಟರ್‌ನ್ಯಾಷನಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಎ ತಂಡ 19 ಓವರ್‌ಗಳಲ್ಲಿ 136 ರನ್‌ಗಳಿಗೆ ಆಲೌಟ್ ಆಯಿತು. 137 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ್ ಎ ತಂಡಕ್ಕೆ ಮಾಝ್ ಸದಾಖತ್ ವೇಗದ ಆರಂಭ ನೀಡಿದರು. ಆದರೆ 10ನೇ ಓವರ್‌ನಲ್ಲಿ ಸುಯಶ್ ಶರ್ಮಾ ಎಸೆದ ಚೆಂಡನ್ನು ಮಾಝ್ ಲಾಂಗ್ ಆಫ್‌ಗೆ ಬಾರಿಸಿದಾಗ, ನೆಹಾಲ್ ವಧೇರಾ ಅದ್ಭುತ ಕ್ಯಾಚ್ ಹಿಡಿದರು.
ಕ್ಯಾಚ್ ಹಿಡಿದ ನಂತರ ಸಮತೋಲನ ಕಳೆದುಕೊಂಡ ವಧೇರಾ ಬೌಂಡರಿ ಲೈನ್ ದಾಟಿದರು. ಅಷ್ಟರಲ್ಲೇ ಅವರು ಚೆಂಡನ್ನು ಸಹ ಆಟಗಾರ ನಮನ್ ಧೀರ್‌ಗೆ ಒಪ್ಪಿಸಿದರು. ಈಗಾಗಲೇ ಪಾಕಿಸ್ತಾನಿ ಬ್ಯಾಟರ್ ಮೈದಾನ ತೊರೆದಂತೆ ನಡೆದುಬಿಟ್ಟಿದ್ದರು, ಮತ್ತು ಭಾರತೀಯ ಆಟಗಾರರು ಸಂಭ್ರಮಿಸಿದರು. ಆದರೆ ಮೂರನೇ ಅಂಪೈರ್ ದೀರ್ಘ ಪರಿಶೀಲನೆ ಬಳಿಕ ‘ನಾಟೌಟ್’ ಎಂದು ಘೋಷಿಸಿದರು. ವಧೇರಾ ಕಾಲು ಬೌಂಡರಿ ಲೈನ್‌ಗೆ ತಾಕದಿದ್ದರೂ, ತೀರ್ಪು ಹೊಸ ನಿಯಮದ ಆಧಾರದ ಮೇಲೆ ಬದಲಾಯಿತು.
ಐಸಿಸಿಯ ನೂತನ ನಿಯಮದ ಪ್ರಕಾರ, ರಿಲೇ ಕ್ಯಾಚ್ ಸಂದರ್ಭದಲ್ಲಿ ಬೌಂಡರಿ ದಾಟಿದ ಫೀಲ್ಡರ್ ಚೆಂಡನ್ನು ಪಾಸ್ ಮಾಡಿದ ಬಳಿಕ, ಎರಡನೇ ಫೀಲ್ಡರ್ ಕ್ಯಾಚ್ ಹಿಡಿಯುವ ಮುನ್ನವೇ ಮೈದಾನದ ಒಳಗೆ ಮರಳಿರಬೇಕು. ಆದರೆ ಈ ಘಟನೆಯಲ್ಲಿ ನಮನ್ ಧೀರ್ ಕ್ಯಾಚ್ ಹಿಡಿಯುವ ಹೊತ್ತಿಗೆ ವಧೇರಾ ಮೈದಾನದ ಒಳಗೆ ಇರಲಿಲ್ಲ. ಈ ಕಾರಣದಿಂದ ಕ್ಯಾಚ್ ಅಮಾನ್ಯಗೊಂಡಿತು.
ಈ ನಿಯಮ ಜೂನ್‌ನಿಂದ ಜಾರಿಯಲ್ಲಿದ್ದರೂ, ಭಾರತ ಎ ಆಟಗಾರರಿಗೆ ಅದರ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ತೀರ್ಪಿನ ನಂತರ ಫೀಲ್ಡ್ ಅಂಪೈರ್ ತಂಡದ ನಾಯಕ ಜಿತೇಶ್ ಶರ್ಮಾ ಸೇರಿದಂತೆ ಆಟಗಾರರಿಗೆ ನಿಯಮವನ್ನು ವಿವರಿಸಿದರು. ವಿವಾದ ತಣ್ಣಗಾದ ಬಳಿಕ ಪಂದ್ಯ ಸಾಮಾನ್ಯವಾಗಿ ಮುಂದುವರಿಯಿತು.

