ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ದಯಾನಂದ್ ಅವರ ಹೆಸರನ್ನು ಬಳಸಿಕೊಂಡು ಸೈಬರ್ ಕಿಡಿಗೇಡಿಗಳು ಮತ್ತೊಮ್ಮೆ ವಂಚನೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದು ನಾಲ್ಕನೇ ಬಾರಿಗೆ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಯಾದ ಪ್ರಕರಣವಾಗಿದ್ದು, ಖದೀಮರು ಇದೀಗ ಅವರ ಫೋಟೋಗಳನ್ನು ಬಳಸಿ ಹಲವು ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.
ವೈರಲ್ ವಿಡಿಯೋ ಬೆನ್ನಲ್ಲೇ ನಕಲಿ ಖಾತೆಗಳ ಸೃಷ್ಟಿ:
ದಯಾನಂದ್ ಅವರು ಪ್ರಸ್ತುತ ಕಾರಾಗೃಹ ಎಡಿಜಿಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಜೈಲಿನೊಳಗಿನ ಘಟನೆಗಳಿಗೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿತ್ತು. ಈ ವಿಡಿಯೋ ವೈರಲ್ ಆಗಿರುವುದು ದಯಾನಂದ್ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಎಂಬ ಮಾತು ಕೇಳಿ ಬಂದಿತ್ತು. ಈ ವಿವಾದದ ಬೆನ್ನಲ್ಲೇ ಸೈಬರ್ ಖದೀಮರು ಸಕ್ರಿಯರಾಗಿದ್ದು, ಸೂಟ್ ಧರಿಸಿದ ಮತ್ತು ಮಕ್ಕಳೊಂದಿಗೆ ಇರುವ ದಯಾನಂದ್ ಅವರ ಅಧಿಕೃತ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಖಾತೆಯನ್ನು ತೆರೆದಿದ್ದಾರೆ.
ನಾಲ್ಕನೇ ಬಾರಿಗೆ ದೂರು ದಾಖಲು:
ಈ ಹಿಂದೆ ಮೂರು ಬಾರಿ ಇದೇ ರೀತಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಲಾಗಿದ್ದ ಬಗ್ಗೆ ಎಡಿಜಿಪಿ ದಯಾನಂದ್ ಅವರು ಸ್ವತಃ ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದರು. ಆದರೂ, ಸೈಬರ್ ಖದೀಮರು ತಮ್ಮ ಕೃತ್ಯವನ್ನು ಮುಂದುವರೆಸಿದ್ದಾರೆ. ಸದ್ಯ ಹಲವು ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿರುವ ಬಗ್ಗೆ ದೂರು ದಾಖಲಾಗಿದ್ದು, ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಯಾನಂದ್ ಅವರ ಹೆಸರಿನಲ್ಲಿ ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ಅಥವಾ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೋರಲಾಗಿದೆ.

