ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು. ಇಂದಿನಿಂದ ಶುಕ್ರವಾರದವರೆಗೂ (ನ.21) ಒಟ್ಟು ಐದು ದಿನಗಳ ಕಾಲ ಈ ವಿಶಿಷ್ಟ ಜಾತ್ರೆ ನಡೆಯಲಿದೆ.
ಇಂದು ಬೆಳಗ್ಗೆ 10:40ಕ್ಕೆ ದೊಡ್ಡಬಸವಣ್ಣ ದೇವಾಲಯದ ಆವರಣದಲ್ಲಿ ಸಚಿವರು ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಸಲ್ಲಿಸಿದರು. ಅಲ್ಲದೆ, ಪರಿಷೆಯ ಪ್ರಮುಖ ಸಂಪ್ರದಾಯದಂತೆ ಐದು ಎತ್ತುಗಳಿಗೆ ಕಡಲೆಕಾಯಿ ಗಿಡವನ್ನು ತಿನ್ನಿಸುವ ಮೂಲಕ ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಚಾಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, “ಈ ಕಡಲೆಕಾಯಿ ಪರಿಷೆಗೆ 500 ವರ್ಷಗಳ ಇತಿಹಾಸವಿದ್ದು, ಕೆಂಪೇಗೌಡರ ಕಾಲದಲ್ಲಿ ಆರಂಭವಾಯಿತು,” ಎಂದು ಸ್ಮರಿಸಿದರು.
ಪ್ಲಾಸ್ಟಿಕ್‌ಗೆ ನಿಷೇಧ: ಪರಿಷೆಯು ಪರಿಸರ ಸ್ನೇಹಿಯಾಗಿರಬೇಕು ಎಂಬ ಉದ್ದೇಶದಿಂದ ಈ ಬಾರಿ ಪ್ಲಾಸ್ಟಿಕ್ ಬಳಸುವ ಅಂಗಡಿಗಳನ್ನು ಮುಚ್ಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಉಚಿತ ಮಳಿಗೆಗಳು: ರೈತರಿಗೆ ಮತ್ತು ವ್ಯಾಪಾರಿಗಳಿಗೆ ಉತ್ತೇಜನ ನೀಡಲು ಈ ಬಾರಿ ಶುಲ್ಕ ರಹಿತ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಅಂದ ಹೆಚ್ಚಿಸಿದ ಅಲಂಕಾರ: ಪರಿಷೆ ನಡೆಯುವ ನಾಲ್ಕೈದು ರಸ್ತೆಗಳಲ್ಲಿ ವಿಶೇಷ ಲೈಟಿಂಗ್ ವ್ಯವಸ್ಥೆ ಹಾಗೂ ಆಕರ್ಷಕ ಹೂವಿನ ಅಲಂಕಾರ ಮಾಡಲಾಗಿದೆ ಎಂದು ತಿಳಿಸಿದರು.
ಜನಸಂದಣಿ ನಿರೀಕ್ಷೆ: ಕಳೆದ ವರ್ಷ 4-5 ಲಕ್ಷ ಜನರು ಪರಿಷೆಗೆ ಭೇಟಿ ನೀಡಿದ್ದರು. ಈ ವರ್ಷ ಇನ್ನೂ ಎರಡು ಲಕ್ಷ ಹೆಚ್ಚು ಜನರು ಬರುವ ಸಾಧ್ಯತೆ ಇದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.
ಪರಿಷೆಯ ಯಶಸ್ಸಿಗೆ ಜಿಬಿಎ ಸಂಸ್ಥೆಯು ಹೆಚ್ಚಿನ ಅನುದಾನ ನೀಡಿ ಶ್ರಮಿಸಿದೆ ಎಂದು ಸಚಿವರು ಶ್ಲಾಘಿಸಿದರು. ಹೆಚ್ಚಿನ ಸಂಖ್ಯೆಯ ಜನರು ಈ ಕಡಲೆಕಾಯಿ ಪರಿಷೆಗೆ ಬಂದು ಸುತ್ತಮುತ್ತಲಿನ ದೇವಾಲಯಗಳ ದರ್ಶನವನ್ನೂ ಪಡೆಯುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

