Monday, November 17, 2025

CINE | ‘ಕಾಂತಾ’ಗೆ ಬಾಕ್ಸ್‌ ಆಫೀಸ್ ನಲ್ಲಿ ನೀರಸ ಪ್ರತಿಕ್ರಿಯೆ: ಮೂರು ದಿನದ ಗಳಿಕೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್ 14ರಂದು ಬಿಡುಗಡೆಯಾದ ದುಲ್ಕರ್ ಸಲ್ಮಾನ್ ಅಭಿನಯದ ‘ಕಾಂತಾ’ ಚಿತ್ರವು ತೆರೆಗೆ ಬಂದ ಕ್ಷಣದಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. 1950ರ ದಶಕದ ಮದ್ರಾಸ್ ಪ್ರಾಂತ್ಯವನ್ನು ಹಿನ್ನೆಲೆಯಾಗಿ ಹೊಂದಿರುವ ಈ ಚಿತ್ರವನ್ನು ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದಾರೆ.

ಭಾಗ್ಯಶ್ರೀ ಬೋಸ್ ನಾಯಕಿಯಾಗಿ ಕಾಣಿಸಿಕೊಂಡರೆ, ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸ್ಪಿರಿಟ್ ಮೀಡಿಯಾ ಮತ್ತು ವೆಬೆರರ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿದ್ದು, ಜೇಕ್ಸ್ ಬಿಜಾಯ್ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರಕ್ಕೆ ಬಿಡುಗಡೆಯಾದ ಮೊದಲ ದಿನದಿಂದಲೇ ಮಿಶ್ರ ವಿಮರ್ಶೆಗಳು ಸಿಕ್ಕಿದ್ದರೂ, ಬಾಕ್ಸ್‌ ಆಫಿಸ್ ವರದಿ ಮಾತ್ರ ಗಮನ ಸೆಳೆಯುತ್ತಿದೆ. ತಂಡದ ಪ್ರಕಾರ, ಚಿತ್ರವು ಮೊದಲ ದಿನವೇ 10 ಕೋಟಿ ರೂ. ಗಳಿಸಿದ್ದು, ಮೊದಲ ಮೂರು ದಿನಗಳಲ್ಲಿ ಒಟ್ಟು 22 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದೆ. ತೆಲುಗು ಹಾಗೂ ತಮಿಳು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದ್ದರೂ, ಒಟ್ಟಾರೆ ಪ್ರತಿಕ್ರಿಯೆ ನಿರೀಕ್ಷಿತ ಮಟ್ಟಕ್ಕೆ ಏರಿಲ್ಲ.

ಇತ್ತೀಚಿನ ಸೂಪರ್‌ಹಿಟ್‌ಗಳಾದ ‘ಲಕ್ಕಿ ಭಾಸ್ಕರ್’ ಮತ್ತು ‘ಸೀತಾರಾಮಂ’ ಮೂಲಕ ಭರ್ಜರಿ ಯಶಸ್ಸು ಕಂಡಿದ್ದ ದುಲ್ಕರ್ ಸಲ್ಮಾನ್ ಅವರ ಚಿತ್ರಕ್ಕೆ ಈ ಬಾರಿ ನೀರಸ ಪ್ರತಿಕ್ರಿಯೆ ದಾಖಲಾಗಿದೆ. ಅವರ ಕೆರಿಯರ್‌ನಲ್ಲಿ ಸೋಲಿನ ಚಿತ್ರಗಳ ಸಂಖ್ಯೆ ಕಡಿಮೆ ಇದ್ದರೂ, ‘ಕುರುಪ್’ ಮತ್ತು ‘ಕಿಂಗ್ ಆಫ್ ಕೊತ’ ನಂತರ ‘ಕಾಂತಾ’ ಕೂಡಾ ಅದೇ ಪಟ್ಟಿಗೆ ಸೇರಿರುವುದಾಗಿ ಚಿತ್ರವಲಯದ ಮಾತು.

ಈ ಚಿತ್ರವು ಪ್ರಸಿದ್ಧ ಗಾಯಕ ಹಾಗೂ ನಟ ಎಂ.ಕೆ. ತ್ಯಾಗರಾಜ ಭಾಗವತರ್ ಅವರ ಜೀವನದಿಂದ ಪ್ರೇರಿತವಾದದ್ದು ಎನ್ನಲಾಗುತ್ತಿದೆ. ಪಾತ್ರಕ್ಕೆ ದುಲ್ಕರ್ ತಮ್ಮದೇ ಆದ ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ. ಆದರೂ ಚಿತ್ರಕ್ಕೆ ಬಂದ ವಿಮರ್ಶೆಗಳು ಹಾಗೂ ಬಾಕ್ಸ್‌ ಆಫಿಸ್ ನೀರಸತೆ, ಮುಂದಿನ ದಿನಗಳಲ್ಲಿ ನಟನ ಸ್ಕ್ರಿಪ್ಟ್ ಆಯ್ಕೆ ಮತ್ತಷ್ಟು ಎಚ್ಚರಿಕೆಯಿಂದ ಇರಬಹುದು ಎನ್ನುವ ಚರ್ಚೆ ಜೋರಾಗಿದೆ.

error: Content is protected !!