Wednesday, November 19, 2025

ಶೇಖ್‌ ಹಸೀನಾಗೆ ಗಲ್ಲು ಶಿಕ್ಷೆ: ಕೋರ್ಟ್ ತೀರ್ಪು ಕುರಿತು ಬಾಂಗ್ಲಾ ಮಾಜಿ ಪ್ರಧಾನಿ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ಪ್ರಕಟಿಸಿದೆ.

ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, ಜನರಿಂದ ಚುನಾಯಿತವಲ್ಲದ ಸರ್ಕಾರ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದೆ. ಅವಾಮಿ ಲೀಗ್ ಪಕ್ಷ ಮತ್ತು ತಮಗೆ ಯಾವುದೇ ರೀತಿಯಲ್ಲಿ ಸಮರ್ಥನೆಯನ್ನು ನೀಡಲು ಅವಕಾಶ ನೀಡದೆ ನಮ್ಮನ್ನು ಅಪರಾಧಿಗಳನ್ನಾಗಿ ಮಾಡಿ ಮರಣದಂಡನೆಯ ಶಿಕ್ಷೆಯನ್ನು ಪ್ರಕಟಿಸಿದೆ. ಢಾಕಾ ನ್ಯಾಯಾಲಯದ ನ್ಯಾಯಮಂಡಳಿ ಮತ್ತು ಅದರ ಸದಸ್ಯರು ಪಕ್ಷಪಾತ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಇದು ಚುನಾಯಿತವಲ್ಲದ ಸರ್ಕಾರದ ಉಗ್ರಗಾಮಿ ನಡೆ ಮತ್ತು ಕೊಲೆ ಉದ್ದೇಶವನ್ನು ಬಹಿರಂಗಪಡಿಸಿದೆ. ಅವಾಮಿ ಲೀಗ್ ಪಕ್ಷ ಮತ್ತು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ನ್ಯಾಯಯುತ ಅವಕಾಶ ನೀಡದೇ ಇರುವುದಕ್ಕೆ ನ್ಯಾಯಾಲಯವನ್ನು ಟೀಕಿಸಿದರು.

ಪ್ರಸ್ತುತ ಆಡಳಿತದ ಬಗ್ಗೆ ಸಾರ್ವಜನಿಕವಾಗಿ ಸಹಾನುಭೂತಿ ವ್ಯಕ್ತಪಡಿಸಿರುವ ನ್ಯಾಯಮಂಡಳಿಯು ಪಕ್ಷಪಾತ ನಡೆಸಿದೆ ಎಂದು ಹೇಳಿರುವ ಅವರು, ಐಸಿಟಿಯಲ್ಲಿ ನನ್ನ ವಿರುದ್ಧ ಮಾಡಲಾದ ಆರೋಪಗಳನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ ಉಂಟಾಗಿರುವ ಎಲ್ಲಾ ಸಾವುಗಳಿಗೆ ನಾನು ದುಃಖಿಸುತ್ತೇನೆ. ನಾನು ಅಥವಾ ಇತರ ರಾಜಕೀಯ ನಾಯಕರು ಪ್ರತಿಭಟನಾಕಾರರ ಹತ್ಯೆಗೆ ಆದೇಶಿಸಿರಲಿಲ್ಲ ಎಂದು ಅವರು ಹೇಳಿದರು.

ನನ್ನನ್ನು ಸಮರ್ಥಿಸಿಕೊಳ್ಳಲು ನ್ಯಾಯಾಲಯ ಅವಕಾಶ ನೀಡಿಲ್ಲ. ನನ್ನ ವಕೀಲರು ಗೈರುಹಾಜರಿಯಲ್ಲಿ ಈ ತೀರ್ಪು ಪ್ರಕಟಿಸಲಾಗಿದೆ ಎಂದ ಹಸೀನಾ, ಈ ಹಿಂದೆ ಸರ್ಕಾರದ ಪರವಾಗಿ ಸಹಾನುಭೂತಿ ವ್ಯಕ್ತಪಡಿಸಿದ ಹಿರಿಯ ನ್ಯಾಯಾಧೀಶರು, ವಕೀಲರನ್ನು ತೆಗೆದು ಹಾಕಲಾಗಿತ್ತು ಎಂದರು.

ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಇತರರ ವಿರುದ್ಧ ದಾಖಲಾದ ಹಿಂಸಾಚಾರದ ಅಪರಾಧಿಗಳ ವಿಚಾರಣೆ ಮತ್ತು ಪ್ರಕರಣದ ತನಿಖೆಗೆ ಸಂಬಂಧಿಸಿ ಸರ್ಕಾರ ಏನೂ ಮಾಡಿಲ್ಲ. ಆದರೆ ಐಸಿಟಿಯು ಅವಾಮಿ ಲೀಗ್‌ನ ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದೆ ಎಂದು ದೂರಿದರು.

ಡಾ. ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರ ಲಕ್ಷಾಂತರ ಬಾಂಗ್ಲಾದೇಶಿಗಳನ್ನು ಮೋಸಗೊಳಿಸಲಾಗುವುದಿಲ್ಲ.ಐಸಿಟಿ ವಿಚಾರಣೆಗಳು ಎಂದಿಗೂ ನ್ಯಾಯವನ್ನು ನೀಡುವ ಉದ್ದೇಶ ಹೊಂದಿಲ್ಲ ಎಂಬುದನ್ನು ಈ ತೀರ್ಪು ಬಹಿರಂಗಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಅವಾಮಿ ಲೀಗ್ ಅನ್ನು ಬಲಿಪಶುವನ್ನಾಗಿ ಮಾಡುವುದು ಡಾ. ಯೂನಸ್ ಅವರ ವೈಫಲ್ಯಗಳಿಂದ ಜಗತ್ತಿನ ಗಮನವನ್ನು ಬೇರೆಡೆಗೆ ತಿರುಗಿಸುವುದು ಇದರ ಉದ್ದೇಶವಾಗಿದೆ. ಈ ಪ್ರಕರಣವನ್ನು ಸೂಕ್ತವಾದ ನ್ಯಾಯಮಂಡಳಿಯಲ್ಲಿ ಎದುರಿಸಲು ತಾನು ಹೆದರುವುದಿಲ್ಲ ಎಂದು ಅವರು ಹೇಳಿದ್ದು, ಇದನ್ನು ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮುಂದೆ ತರುವಂತೆ ಬಾಂಗ್ಲಾದ ಸರ್ಕಾರಕ್ಕೆ ಸವಾಲು ಹಾಕಿದರು.

error: Content is protected !!