ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಇಂದು ಮರಣ ದಂಡನೆ ಶಿಕ್ಷೆ ವಿಧಿಸಿ ICT ಕೋರ್ಟ್ ತೀರ್ಪು ಹೊರಡಿಸಿದ್ದು, ಇತ್ತ ಇದರ ಬೆನ್ನಲ್ಲೇ, ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಶೇಖ್ ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ಕೋರಿದೆ.
ಈ ವೇಳೆ ಬಾಂಗ್ಲಾದೇಶ ತನ್ನ ಪತ್ರದಲ್ಲಿ ಎರಡು ರಾಷ್ಟ್ರಗಳ ನಡುವಿನ ಅಸ್ತಿತ್ವದಲ್ಲಿರುವ ಹಸ್ತಾಂತರ ಒಪ್ಪಂದವನ್ನು ಉಲ್ಲೇಖಿಸಿದೆ.ಈ ಮೂಲಕ ಹಸೀನಾ ಬಾಂಗ್ಲಾದೇಶಕ್ಕೆ ಹಸ್ತಾಂತರ ಕಡ್ಡಾಯ ಎಂದು ಹೇಳಿದೆ.
ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಇಂದಿನ ತೀರ್ಪು ತಲೆಮರೆಸಿಕೊಂಡಿರುವ ಅಪರಾಧಿಗಳಾದ ಶೇಖ್ ಹಸೀನಾ ಮತ್ತು ಅಸಾದುಜ್ಜಮಾನ್ ಖಾನ್ ಕಮಲ್ ಅವರನ್ನು ಘೋರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಖಚಿತಪಡಿಸಿದೆ. ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶಿಕ್ಷೆ ವಿಧಿಸಲಾದ ಈ ಅಪರಾಧಿಗಳಿಗೆ ಆಶ್ರಯ ನೀಡುವುದು ಒಂದು ನ್ಯಾಯಕ್ಕೆ ಮಾಡುವ ಅವಮಾನವೆಂದು ಪರಿಗಣಿಸಲಾಗುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಪತ್ರದಲ್ಲಿ ಹೇಳಿದೆ.
ಅಪರಾಧಿಗಳೆಂದು ಸಾಬೀತಾಗಿರುವ ಈ ಇಬ್ಬರು ವ್ಯಕ್ತಿಗಳನ್ನು ತಕ್ಷಣ ಗಡೀಪಾರು ಮಾಡಿ ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ. ಎರಡೂ ದೇಶಗಳ ನಡುವೆ ಇರುವ ಹಸ್ತಾಂತರ ಒಪ್ಪಂದದ ಪ್ರಕಾರ ಇದು ಭಾರತದ ಕರ್ತವ್ಯವಾಗಿದೆ ಎಂದು ಹೇಳಿದೆ.
ಜುಲೈ-ಆಗಸ್ಟ್ 2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಅಶಾಂತಿಗೆ ಸಂಬಂಧಿಸಿದ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶೇಖ್ ಹಸೀನಾ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಇಂದು ಮರಣದಂಡನೆ ವಿಧಿಸಿದೆ.

