Tuesday, November 18, 2025

ಪತಿಯ ಅನುಮಾನ, ನಿಂದನೆ: ಸಹಿಸಲಾಗದೆ ಜಲಸಮಾಧಿಯಾದ ತಾಯಿ-ಮಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪತಿ ಮತ್ತು ಅತ್ತೆಯ ನಿರಂತರ ಕಿರುಕುಳದಿಂದ ಮನನೊಂದ ಗೃಹಿಣಿಯೊಬ್ಬರು ತಮ್ಮ ಒಂದುವರೆ ವರ್ಷದ ಮಗುವಿನೊಂದಿಗೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಅರಕಲಗೂಡು ತಾಲೂಕಿನ ರಾಮನಾಥಪುರ ಬಳಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಮಹಾದೇವಿ (29) ಎಂದು ಗುರುತಿಸಲಾಗಿದೆ. ಸೀಬಿಹಳ್ಳಿ ಗ್ರಾಮದ ಕುಮಾರ್‌ ಜೊತೆ ಮೂರು ವರ್ಷಗಳ ಹಿಂದೆ ಮಹಾದೇವಿ ಎರಡನೇ ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ ಕುಟುಂಬಸ್ಥರು 100 ಗ್ರಾಂ ಚಿನ್ನವನ್ನು ವರದಕ್ಷಿಣೆಯ ರೂಪದಲ್ಲಿ ನೀಡಿದ್ದರು.

ಕಿರುಕುಳ ಮತ್ತು ಮಾನಸಿಕ ಹಿಂಸೆ:

ಆದರೆ, ಇತ್ತೀಚೆಗೆ ಪತ್ನಿ ಮಹಾದೇವಿ ಮೇಲೆ ಅನುಮಾನ ಪಡುತ್ತಿದ್ದ ಪತಿ ಕುಮಾರ್, ನಿರಂತರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಕಿರುಕುಳ ತಾಳಲಾರದೆ ಮಹಾದೇವಿ ಹದಿನೈದು ದಿನಗಳ ಹಿಂದೆ ತವರು ಮನೆ ಸೇರಿದ್ದರು. ಅಲ್ಲಿಗೂ ಸುಮ್ಮನಾಗದ ಪತಿ ಕುಮಾರ್, ಪತ್ನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ಮುಂದುವರೆಸಿದ್ದರು.

ಆತ್ಮಹತ್ಯೆಗೆ ಮುನ್ನ ವೀಡಿಯೋ ಸಂದೇಶ:

ಘಟನೆ ನಡೆದ ಗುರುವಾರದಂದು ಹಾಸನಕ್ಕೆ ಬಂದಿದ್ದ ಮಹಾದೇವಿಗೆ ಬಸ್ ನಿಲ್ದಾಣದಲ್ಲೇ ಪತಿ ಕುಮಾರ್ ನಿಂದಿಸಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಮಹಾದೇವಿ, ನಂತರ ಹಾಸನ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ಮಹಾದೇವಿ, ಡೆತ್‌ನೋಟ್ ಬರೆದು, ಮಗುವಿನೊಂದಿಗೆ ವೀಡಿಯೋ ಮಾಡಿ ನಾಪತ್ತೆಯಾಗಿದ್ದರು.

ಆತ್ಮಹತ್ಯೆಗೆ ಮುನ್ನ ಮಹಾದೇವಿ ಮಾಡಿರುವ ವೀಡಿಯೋದಲ್ಲಿ, “ಪತಿಯ ನಿಂದನೆ ಸಹಿಸಲು ಆಗುತ್ತಿಲ್ಲ. ನನ್ನ ಸಾವಿಗೆ ನನ್ನ ಗಂಡ, ನನ್ನ ಅತ್ತೆಯೇ ಕಾರಣ. ಹೋರಾಟ ಮಾಡಲು ನನ್ನಿಂದ ಆಗುತ್ತಿಲ್ಲ. ನಾನು ಇದ್ದರೆ ನನ್ನ ತಮ್ಮ, ಅಪ್ಪ-ಅಮ್ಮನಿಗೂ ತೊಂದರೆ. ಮೂರು ವರ್ಷಗಳಿಂದ ನರಕ ಕೊಟ್ಟಿದ್ದಾನೆ. ಮಗು ನನಗೆ ಹುಟ್ಟಿಲ್ಲ ಅಂತಾನೆ. ಇದೆಲ್ಲಾ ಕೇಳಿಕೊಂಡು ಬದುಕಲು ಆಗಲ್ಲ, ಈ ಜೀವನವೇ ಬೇಡ,” ಎಂದು ನೋವು ತೋಡಿಕೊಂಡಿದ್ದಾರೆ. ಅಲ್ಲದೆ, ಪತಿ ಕುಮಾರ್ ತನ್ನ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿದ್ದ ವಿಷಯವನ್ನೂ ತಿಳಿಸಿದ್ದಾರೆ.

ಮಹಿಳೆಯ ಮೃತದೇಹ ಪತ್ತೆ:

ಕುಟುಂಬಸ್ಥರ ಹುಡುಕಾಟದ ಬಳಿಕ, ಸೋಮವಾರ ಅರಕಲಗೂಡು ತಾಲೂಕಿನ ಬೆಟ್ಟಸೋಗೆ ಬಳಿ ಮಹಾದೇವಿ ಅವರ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ರಾಮನಾಥಪುರ ಬಳಿಯ ಕಾವೇರಿ ನದಿಗೆ ಮಗುವಿನೊಂದಿಗೆ ಹಾರಿ ಮಹಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದುರದೃಷ್ಟವಶಾತ್, ಮಗುವಿನ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!